ಮಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಮೃತರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಗ್ರಾಹಕರ ಹಕ್ಕುಗಳ ಸಂರಕ್ಷಕನಾಗಿ ಕಾರ್ಯ ನಿರ್ವಹಿಸುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (ಗ್ರಾಹಕ ನ್ಯಾಯಾಲಯ) ತೀರ್ಪು ನೀಡಿದೆ.
ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದ.ಕ.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನ.8ರಂದು ನೀಡಿರುವ ತೀರ್ಪಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿರುವ ಮೃತರ ಸಂಬಂಧಿಕರಿಗೆ ಒಂದು ತಿಂಗಳಲ್ಲಿ 5 ಲಕ್ಷ ರೂ. ಪರಿಹಾರ ಪಾವತಿಸದಿದ್ದರೆ, ಬಳಿಕ ಈ ಮೊತ್ತಕ್ಕೆ ಶೇ.8ರ ಬಡ್ಡಿ ಸೇರಿಸಿ ನೀಡುವಂತೆ ತಿಳಿಸಿದೆ.
ಪ್ರಕರಣದ ವಿವರ: 2019ರ ಅಕ್ಟೋಬರ್ 25ರಂದು ವಿಲ್ಸನ್ ಅಲನ್ ಫೆರ್ನಾಂಡಿಸ್ ಎಂಬವರು ಮೃತಪಟ್ಟಿದ್ದರು. ಈ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಸೇವೆಗಾಗಿ ಆಸ್ಪತ್ರೆಯವರು 2,250 ರೂ. ಪಡೆದಿದ್ದರು. 2019ರ ಅಕ್ಟೋಬರ್ 27ರಂದು ರೆಫ್ರಿಜರೇಟರ್ ಹಾಳಾಗಿರುವುದರಿಂದ ಮೃತದೇಹವನ್ನು ಕೊಂಡೊಯ್ಯುವಂತೆ ಆಸ್ಪತ್ರೆಯವರು ಮೃತರ ಸಹೋದರ ನೆಲ್ಸನ್‌ರಿಗೆ ದೂರವಾಣಿಯ ಮೂಲಕ ತಿಳಿಸಿದ್ದರು. ಆದರೆ ಮೃತದೇಹವನ್ನು ನೆಲ್ಸನ್ ನೋಡಿದಾಗ ಅದು ಸಂಪೂರ್ಣವಾಗಿ ಕೊಳೆತಿತ್ತು. ಈ ಬಗ್ಗೆ ವಿಚಾರಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಮೃತದೇಹ ಇರಿಸುವ ರೆಫ್ರಿಜರೇಟರ್ ಕಾರಣ ಹೀಗಾಗಿರುವುದಾಗಿ ತಿಳಿಸಿದ್ದರು. ಆದರೆ ಇದರಿಂದ ಮಾನಸಿಕವಾಗಿ ತೊಂದರೆಗೆ ಒಳಗಾಗಿದ್ದ ಮೃತರ ಕುಟುಂಬ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.
ಮೃತದೇಹ ಕೊಳೆತಿರುವ ಕಾರಣ ಮೃತದೇಹಕ್ಕೆ ಗೌರವ ಸಲ್ಲಿಸಲು ಅಸಾಧ್ಯವಾಗಿದ್ದು, ಇದು ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಸೇವಾ ಲೋಪ ಎಂದು ನೆಲ್ಸನ್ ತಮ್ಮ ದೂರಿನಲ್ಲಿ ತಿಳಿಸಿದ್ದರು. ಆದರೆ ಆಸ್ಪತ್ರೆಯವರು ರೆಫ್ರಿಜರೇಟರ್ ಅನಿರೀಕ್ಷಿತವಾಗಿ ಕೆಟ್ಟುಹೋದ ಕಾರಣ ಸಮಸ್ಯೆಯಾಗಿತ್ತು. ಈ ಕುರಿತು ಆಸ್ಪತ್ರೆಯಿಂದ ಸೂಚನೆ ನೀಡಿದ ತಕ್ಷಣ ಸಂಬಂಧಪಟ್ಟವರು ಮೃತದೇಹ ಸಾಗಿಸುತ್ತಿದ್ದರೆ ಕೊಳೆಯುತ್ತಿರಲಿಲ್ಲ ಎಂಬ ಉತ್ತರವನ್ನೂ ನೀಡಿದ್ದರು. ಈ ಬಗ್ಗೆ ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗದಲ್ಲಿ ವಿಚಾರಣೆ ನಡೆದು, ಆಯೋಗವು ಈ ಪ್ರಕರಣವನ್ನು ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಸೇವಾ ಲೋಪ ಎಂದು ತೀರ್ಮಾನಿಸಿ, ಮೃತರ ಸಂಬಂಧಿಕರಿಗೆ ಪರಿಹಾರ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದೆ.
ದೂರುದಾರರ ಪರವಾಗಿ ಮಂಗಳೂರಿನ ನ್ಯಾಯವಾದಿ ಎ.ದಿನೇಶ ಭಂಡಾರಿ ಹಾಗೂ ಕೆ.ಎಸ್.ಎನ್. ಅಡಿಗ ವಾದಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಆಸ್ತಿಗಾಗಿ ತಂದೆಯ ಕಣ್ಣು ಕಿತ್ತ ಮಗನಿಗೆ 9 ವರ್ಷ ಕಠಿಣ ಜೈಲು ಶಿಕ್ಷೆ