ಬಂಟ್ವಾಳ(ದ.ಕ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸಂಭ್ರಮದ ಕಾರ್ಯಕ್ರಮವಿರಲಿ, ಅಲ್ಲೆಲ್ಲಾ ಕಲ್ಲಡ್ಕದ ಗೊಂಬೆಗಳದ್ದೇ ಕಾರುಬಾರು. ಅವುಗಳಿದ್ದರೇನೇ ಆ ಸಂಭ್ರಮಕ್ಕೊಂದು ಮೆರುಗು. ವಿವಿಧ ವೇಷಗಳನ್ನು ಹಾಕಿಕೊಂಡು ಈ ಗೊಂಬೆಗಳು ನರ್ತಿಸುತ್ತಿದ್ದರಂತೂ ಅಬ್ಬಾ..! ನೋಡಲೆರಡು ಕಣ್ಣು ಸಾಲದು. ಈ ಬಾರಿ ನಮ್ಮ ಕಲ್ಲಡ್ಕ ಗೊಂಬೆಗಳು ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದೆ. ಅದ್ಯಾವ ಕಾರ್ಯಕ್ರಮ ಅಂತೀರಾ? ಇಲ್ಲಿದೆ ನೋಡಿ.
ಕಳೆದ 37 ವರ್ಷಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ಗೊಂಬೆಗಳನ್ನು ಪರಿಚಯಿಸಿದ ಕೀರ್ತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮೇಶ್ ಕಲ್ಲಡ್ಕ ಅವರಿಗೆ ಸಲ್ಲುತ್ತದೆ. ಶಿಲ್ಪಾ ಗೊಂಬೆ ಬಳಗ ಎಂದೇ ಖ್ಯಾತಿ ಪಡೆದ ಈ ತಂಡವು ಡಿ.21 ರಿಂದ 27ರವರೆಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಭಾಗವಹಿಸಲಿದೆ. 50 ಬೃಹತ್ ತಟ್ಟಿರಾಯ(ಬೇತಾಳ)ಗಳು ಸೇರಿದಂತೆ 150 ಕ್ಕೂ ಅಧಿಕ ಕಲ್ಲಡ್ಕ ಶಿಲ್ಪಾ ಗೊಂಬೆಗಳು ಜಾಂಬೂರಿಯಲ್ಲಿ ಕುಣಿಯಲಿವೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ಈ ಜಾಂಬೂರಿಯು ಡಾ. ಎಂ ಮೋಹನ್ ಆಳ್ವ ಅವರ ಪರಿಕಲ್ಪನೆಯಂತೆ ಮೂಡಿಬರಲಿದೆ. ಇದಕ್ಕಾಗಿಯೇ ರಮೇಶ್ ಕಲ್ಲಡ್ಕ ಅವರು ವಿವಿಧ ಗೊಂಬೆಗಳ ಅಂತಿಮ ಹಂತದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾರು 10 ರಿಂದ 13 ಅಡಿಯ ತಟ್ಟಿರಾಯನ ಗೊಂಬೆಗಳು, ಕೀಲುಕುದುರೆಗಳು, ಸಣ್ಣ ಗೊಂಬೆಗಳು, ಕರಗ, ಜೋಕರ್, ಕಾರ್ಟೂನ್ ಗೊಂಬೆಗಳು ಸೇರಿದಂತೆ ಹಲವು ಕಲಾಕೃತಿಗಳು ಕಲ್ಲಡ್ಕದಲ್ಲಿ ಸಿದ್ಧಗೊಳ್ಳುತ್ತಿವೆ.
ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ ಮೂಲಕ ನಾಡಿನ ಅನೇಕ ಕಲಾವಿದರಿಗೆ ವೇದಿಕೆ ಒದಗಿಸುತ್ತಿರುವ ಕಲಾಪೋಷಕ ಮೋಹನ್ ಆಳ್ವರು ಕಳೆದ 25 ವರ್ಷಗಳಿಂದ ಶಿಲ್ಪಾಗೊಂಬೆ ಬಳಗವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಜಾಂಬೂರಿಯ ಮೂಲಕ ನಮ್ಮಂತ ಹಲವು ಕಲಾವಿದರಿಗೆ ವೇದಿಕೆ ಒದಗಿಸಿಕೊಟ್ಟಿರುವುದು ಅಭಿಮಾನದ ಸಂಗತಿ ಎಂದು ಹೇಳುತ್ತಾರೆ ಶಿಲ್ಪಾ ಗೊಂಬೆ ಬಳಗದ ಮಾಲೀಕ ರಮೇಶ್ ಕಲ್ಲಡ್ಕ ಅವರು.
ತೆರೆದುಕೊಳ್ಳಲಿದೆ ಗೊಂಬೆಗಳ ಕಾರ್ಟೂನ್ ಪ್ರಪಂಚ: ದೇಶ ವಿದೇಶಗಳ ಸಾವಿರಾರು ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸುವ ಈ ಜಾಂಬೂರಿಯಲ್ಲಿ ಶಿಲ್ಪಾಗೊಂಬೆ ಬಳಗ ಮಕ್ಕಳನ್ನೇ ಕೇಂದ್ರವಾಗಿರಿಸಿಕೊಂಡು ಗೊಂಬೆಗಳ ಕಾರ್ಟೂನ್ ಪ್ರಪಂಚವನ್ನೇ ತೆರೆಯಲಿದೆ. ರಮೇಶ್ ಕಲ್ಲಡ್ಕ ಅವರ ಪುತ್ರ ನಿತಿನ್ ಕಲ್ಲಡ್ಕ ಅವರ ನೇತೃತ್ವದಲ್ಲಿ ಕಾರ್ಟೂನ್ ನಲ್ಲಿ ಕಾಣಸಿಗುವ, ಮಿಕ್ಕಿ ಮೌಸ್, ಮಿನಿ ಮೌಸ್, ಮೋಟು-ಪಟ್ಲು, ಮಾಶ, ಟಾಮ್ & ಜೆರ್ರಿ, ಚೋಟಾಭೀಮ್, ಡೊನಾಲ್ಡ್ ಡಕ್ ಮೊದಲಾದ ಗೊಂಬೆಗಳು ಮನರಂಜಿಸಲಿವೆ.
ಇದನ್ನೂ ಓದಿ: ಸೋಜಿಗದ ಸೂಜಿ ಮಲ್ಲಿಗೆ, ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ: ಮುಸ್ಲಿಂ ಯುವತಿ ಹಾಡಿಗೆ ತಲೆಬಾಗಿದ ಜನ