ಸುಳ್ಯ(ದಕ್ಷಿಣ ಕನ್ನಡ): ಇಲ್ಲಿನ ಬೆಳ್ಳಾರೆಯಲ್ಲಿ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕನಸಿನ ಯೋಜನೆಯಾದ ಮನೆ ನಿರ್ಮಾಣಕ್ಕೆ ಇಂದು ಹಲವು ಮುಖಂಡರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಈಗಾಗಲೇ ಪ್ರವೀಣ್ ನೆಟ್ಟಾರು ಅವರ ಮನೆ ನಿರ್ಮಾಣದ ಕುರಿತು ಕುಟುಂಬಸ್ಥರ ಜೊತೆಗೆ ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತನ್ನ ತವರು ಮನೆ ಸುಳ್ಯದ ಕುಂಜಾಡಿಯಲ್ಲಿ ಸಮಾಲೋಚನೆ ನಡೆಸಿದ್ದರು. ಆ ಸಮಯದಲ್ಲಿ ಪ್ರವೀಣ್ ನೆಟ್ಟಾರು ಅವರ ತಂದೆ ಶೇಖರ ಪೂಜಾರಿ, ಬಂಧು ರಂಜಿತ್, ಪ್ರವೀಣ್ ಅವರ ಪತ್ನಿ ನೂತನಾ ಅವರೂ ಉಪಸ್ಥಿತರಿದ್ದರು. ಈಗಾಗಲೇ ಪ್ರವೀಣ್ ಅವರ ಪತ್ನಿ ನೂತನಾಗೆ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ನೀಡಲಾಗಿದೆ.
ಬಿಜೆಪಿ ವತಿಯಿಂದ ಪ್ರವೀಣ್ ಕುಟುಂಬಕ್ಕೆ ಹೊಸ ಮನೆಯನ್ನು ಕಟ್ಟಿಸಿಕೊಡುವುದಾಗಿ ಸಂಸದ ನಳಿನ್ ಕುಮಾರ್ ಅವರು ಭರವಸೆ ನೀಡಿದ್ದರು. ಪ್ರವೀಣ್ ಅವರ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿ ಈಗಿರುವ ಮನೆಯ ಸಮೀಪದಲ್ಲೇ ಹೊಸ ಮನೆಯನ್ನು ನಿರ್ಮಿಸುವುದು ಪ್ರವೀಣ್ ಅವರ ಕನಸಾಗಿತ್ತು. ಅದೇ ಜಾಗದಲ್ಲಿ ಮನೆ ನಿರ್ಮಾಣ ಆಗಬೇಕೆಂಬುದು ಕುಟುಂಬದವರ ಆಶಯವೂ ಆಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಗುದ್ದಲಿಪೂಜೆ ನಡೆಸುವ ಮೂಲಕ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 60 ಲಕ್ಷ ರೂಪಾಯಿ ವೆಚ್ಚದಲ್ಲಿ 2,700ಚದರ್ ಅಡಿ ಮನೆಯು ಪ್ರವೀಣ್ ನೆಟ್ಟಾರು ಸಮಾಧಿಯ ಪಕ್ಕದಲ್ಲಿ ಮೇ ತಿಂಗಳ ಅಂತ್ಯದೊಳಗೆ ನಿರ್ಮಾಣವಾಗಲಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಶಾಸಕ ಸಂಜೀವ ಮಠಂದೂರು ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು: ಎಡಿಜಿಪಿ ಅಲೋಕ್ ಕುಮಾರ್