ಮಂಗಳೂರು: ಕಾಂಗ್ರೆಸ್ ಸಂಸದೀಯ ನಡವಳಿಕೆಗೆ ವಿರುದ್ಧವಾಗಿ ವಿಧಾನ ಪರಿಷತ್ ಅನ್ನು ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಿ ಬಳಸಿಕೊಳ್ಳುವುದು ಅತ್ಯಂತ ಖೇದಕರ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ಸಭಾಪತಿ ಆಯ್ಕೆ ಮಾಡುವಾಗ, ಗೋಹತ್ಯೆ ಮಸೂದೆಯನ್ನು ಅಂಗೀಕಾರ ಮಾಡುವಾಗ, ರಾಜ್ಯಪಾಲರ ವಂದನಾ ನಿರ್ಣಯ ಮಂಡಿಸುವಾಗ ಮತ್ತಿತರ ಸಂದರ್ಭದಲ್ಲಿ ಸರಕಾರಕ್ಕೆ ಅಥವಾ ವಿಧಾನ ಪರಿಷತ್ನ ಹೊಸ ಸದಸ್ಯರಿಗೆ ಕಾಂಗ್ರೆಸ್ ಮಾತನಾಡುವ ಅವಕಾಶ ನೀಡದ ರೀತಿಯಲ್ಲಿ ಸುಮ್ಮನೆ ಗದ್ದಲ ಎಬ್ಬಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ವಿಧಾನ ಪರಿಷತ್ ಅನ್ನು ತನ್ನ ಪಕ್ಷ ರಾಜಕೀಯದ ವೇದಿಕೆಯಾಗಿ ಪರಿವರ್ತನೆ ಮಾಡಿರೋದು ಅತ್ಯಂತ ಖೇದಕರ ಹಾಗೂ ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ಕಾಂಗ್ರೆಸ್ಗೂ, ಜನತಾದಳಕ್ಕೂ, ಸಿದ್ದರಾಮಯ್ಯರಿಗೂ, ಕುಮಾರಸ್ವಾಮಿಗೂ ಇರುವ ಅಭಿಪ್ರಾಯ ಭೇದವನ್ನು ತೋರ್ಪಡಿಸಲು ವಿಧಾನ ಪರಿಷತ್ ನ ಕಾರ್ಯಚಟುವಟಿಕೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಭಾಪತಿ ಆಯ್ಕೆಯ ಸಂದರ್ಭದಲ್ಲಿ ಸಂಖ್ಯೆ ಇಲ್ಲ ಎಂದು ಹೇಳಿದಾಗ ವಿಧಾನ ಪರಿಷತ್ ವಿಶೇಷ ಪರಿಸ್ಥಿತಿಯಲ್ಲಿ ಹೊಂದಾಣಿಕೆಯನ್ನು ಮಾಡಬೇಕಾಗುತ್ತದೆ. ಆದರೆ, ಅವಿಶ್ವಾಸದ ನಿರ್ಣಯ ಬಂದಾಗ ಆ ಸ್ಥಾನದ ಮೌಲ್ಯಕ್ಕೆ ಸರಿಯಾಗಿ ನಮಗೆ ಸಂಖ್ಯೆ ಇಲ್ಲ ಎಂದಾಗ ರಾಜಿನಾಮೆ ಕೊಡುವಂತದ್ದು, ಅವಿಶ್ವಾಸ ಎದುರಿಸುವಂಥದ್ದು, ಅಲ್ಲಿನ ಸಂಪ್ರದಾಯ. ಸಭಾಪತಿಯ ಸ್ಥಾನದಲ್ಲಿ ಜನತಾದಳದ ನಿಲುವು ಏನು ಎಂಬುದನ್ನು ತೋರಿಸಿಕೊಡಲು ರಾಜಕೀಯ ಮೇಲಾಟಕ್ಕೆ ಸಾಕಷ್ಟು ಗೊಂದಲ ಏರ್ಪಡಿಸಲಾಯಿತು. ಪ್ರತಿಯೊಂದು ಸಂದರ್ಭದಲ್ಲಿ ಕಾಂಗ್ರೆಸ್ ನವರು ಸಭಾಪತಿ ಮೇಲೆ ಒತ್ತಡ ತಂದು ಒಂದಷ್ಟು ಕಾಲ ಮುಂದುವರಿಸಿದರು. ವಿಧಾನ ಪರಿಷತ್ ನಲ್ಲಿಪಕ್ಷ ರಾಜಕೀಯಕ್ಕಿಂತಲೂ ಸಭಾಪತಿ ಸ್ಥಾನವನ್ನು ವಿಶೇಷವಾಗಿ ನೋಡಬೇಕಾದದ್ದಿದೆ. ಆದರೆ, ಕಾಂಗ್ರೆಸ್ ಇವನ್ನೆಲ್ಲ ಗಮನಿಸದೇ ರಾಜಕೀಯ ಮಾಡುತ್ತಿದೆ ಎಂದು ದೂರಿದರು.