ಮಂಗಳೂರು: ಅದಾನಿಯವರ ಕಂಪನಿ ಯುಪಿಸಿಎಲ್ನಿಂದ ವಿದ್ಯುತ್ ಪ್ರಸರಣ ತಂತಿಯೊಂದು ಬಂಟ್ವಾಳ ತಾಲೂಕಿನ ಮೂಲಕ ಕೇರಳಕ್ಕೆ ಹಾದು ಹೋಗಲಿದ್ದು, ಗೂಗಲ್ ಸರ್ವೇ ಆಗಿದೆಯೆಂಬ ಮಾಹಿತಿ ಇದೆ. ಸ್ಥಳೀಯರಿಗೆ ಯಾವುದೇ ಮಾಹಿತಿ ಲಭ್ಯವಿಲ್ಲದ್ದಕ್ಕೆ, ಜನತೆ ಭಯಭೀತರಾಗಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 60 ಮೀಟರ್ ಅಗಲದಲ್ಲಿ ಮೇಲ್ಗಡೆ (ಓವರ್ ಹೆಡ್) ಈ ವಿದ್ಯುತ್ ಪ್ರಸರಣ ತಂತಿಯು ಪಡುಬಿದ್ರೆಯ ನಂದಿಕೂರಿನಿಂದ ಮೂಡುಬಿದಿರೆ ಮೂಲಕ ಬಂದು ಬಂಟ್ವಾಳ ತಾಲೂಕಿಗೆ ಪ್ರವೇಶವಾಗಿ ಕರೋಪಾಡಿ ಗ್ರಾಮದ ಮೂಲಕ ಹಾದು ಕೇರಳಕ್ಕೆ ಹೋಗಲಿದೆ ಎಂದು ಹೇಳಿದರು.
ಈ ವಿದ್ಯುತ್ ಪ್ರಸರಣ ತಂತಿ ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕಿನ ಮೂಲಕ ಹಾದು ಹೋಗಲಿದ್ದು, ಇದರ ಅಡಿಭಾಗದಲ್ಲಿ ಯಾವುದೇ ಕೃಷಿ ಮಾಡಲು ಸಾಧ್ಯವಿಲ್ಲ. ಇದರ ಕಾಮಗಾರಿಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದ್ದು, ಅವರ ತಾಕೋಡೆಯಲ್ಲಿನ ಪ್ಲ್ಯಾಂಟ್ನಲ್ಲಿ ಯಂತ್ರಗಳು, ಕಾಮಗಾರಿ ನಡೆಸಲು ಉಪಕರಣಗಳು ಬಂದು ಬಿದ್ದಿವೆ. ಇದರಿಂದ ಜನರು ಭಯಭೀತರಾಗಿದ್ದು, ಕೆಲವೊಂದು ಕಡೆಗಳಲ್ಲಿ ಈ ಬಗ್ಗೆ ಸ್ಥಳೀಯರೇ ಸೇರಿಕೊಂಡು ಸಭೆಯನ್ನೂ ನಡೆಸಿದ್ದಾರೆ. ಅಲ್ಲದೆ ಮೇಲ್ಗಡೆ ಹಾದು ಹೋಗುವ ಬದಲು ಭೂಮಿಯ ಅಡಿಭಾಗದಲ್ಲಿ ವಿದ್ಯುತ್ ಪ್ರಸರಣ ತಂತಿಯನ್ನು ಹಾಯಿಸಿದಲ್ಲಿ ಉತ್ತಮ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ ಎಂದು ರಮಾನಾಥ ರೈ ಹೇಳಿದರು.