ಪುತ್ತೂರು : ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಬಲೀಂದ್ರ ಪೂಜೆಯಂದು ಬಲಿಹೊರಟು, ಶ್ರೀದೇವರ ವರ್ಷದ ಪ್ರಥಮ ಸವಾರಿಯ ಪೂಕರೆ ಉತ್ಸವವು ನಿನ್ನೆ ವೈಭವದಿಂದ ನಡೆಯಿತು.
ನಂದಿ ಮುಖವಾಡ ಧರಿಸಿದ 'ಬಸವ' ದೈವ ದೇವರನ್ನು ಪೂಕರೆ ಕಟ್ಟೆಗೆ ಕರೆದು ಕೊಂಡು ಬರುವುದೇ ಇದರ ವಿಶೇಷ. ಸಂಜೆ ಶ್ರೀ ದೇವರ ಬಲಿ ಹೊರಟು ದೇಗುಲದ ಪಶ್ಚಿಮ ದ್ವಾರದಿಂದ ರಾಜಮಾರ್ಗದಲ್ಲಿ ಭಂಡಾರದ ಬಿರುದಾವಳಿ, ಛತ್ರ ಚಾಮರ, ಬೇತಾಳ, ಹಸ್ರಕೊಡೆ, ದಂಡುಶಿಲಾಲು, ವಾದ್ಯ ಮೇಳ, ಬಸವ ದೈವದೊಂದಿಗೆ ನೇರವಾಗಿ ಪೂಕರೆ ಕಟ್ಟೆಗೆ ತೆರಳಿ, ಪೂಕರೆ ಕಟ್ಟೆಯಿಂದ ದೇವಳದ ಗದ್ದೆಯನ್ನು ನೋಡಿದ ಬಳಿಕ ಶ್ರೀ ದೇವರು ಕಟ್ಟೆಯಲ್ಲಿ ವಿರಾಜಮಾನರಾದರು.
ವೇ ಮೂ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿಷ್ಣುಪ್ರಸಾದ್ ತಂತ್ರಿ ಮತ್ತು ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಮೂಲ ನಾಗ ಸನ್ನಿಧಿಗೆ ತೆರಳಿದರು. ತಂತ್ರಿಯವರು ಪೂಕರೆ ಗದ್ದೆಗೆ ಪ್ರಾರ್ಥನೆ ಮಾಡಿದರು. ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಮೂಲ ನಾಗನದಲ್ಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪೂಕರೆ ಸಿದ್ಧಪಡಿಸಿದ ಸ್ಥಳದಲ್ಲಿ ಹಿರಿಯರಾದ ಕಿಟ್ಟಣ್ಣ ಗೌಡ ಅವರ ನೇತೃತ್ವದಲ್ಲಿ ಮಧ್ಯಸ್ತ ಶಶಾಂಕ್ ನೆಲ್ಲಿತ್ತಾಯ ಅವರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದರು. ಪೂಕರೆ ಉತ್ಸವಕ್ಕೆ ಸಂಬಂಧಿಸಿದವರು ಜೋಡು ಪೂಕರೆಯನ್ನು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಿದರು. ಬಳಿಕ ಪೂಕರೆ ಕಟ್ಟೆಯಲ್ಲಿ ಶ್ರೀದೇವರಿಗೆ ದೀವಟಿಕೆ ಪ್ರಣಾಮ್, ಕಟ್ಟೆಪೂಜೆ ನಡೆದು, ಬುಲೆಕಾಣಿಕೆ ಸಂಪ್ರದಾಯದಂತೆ ಸೀಮಿತ ಭಕ್ತರಿಗೆ ಸೀಯಾಳ ವಿತರಣೆ ನಡೆಯಿತು.
ಇದನ್ನೂ ಓದಿ : ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡು ಪಂಚಮಹಾರಥೋತ್ಸವ ವೈಭವ- ವಿಡಿಯೋ
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಶೇಖರ್ ನಾರಾವಿ, ಡಾ. ಸುಧಾ ಎಸ್ ರಾವ್, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ಬಿ.ಕೆ.ವೀಣಾ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ರವೀಂದ್ರ ಸೇರಿ ಇತರರು ಭಾಗವಹಿಸಿದ್ದರು.
ಅಷ್ಟೇ ಅಲ್ಲ ಪೂಕರೆ ಕಟ್ಟೆಯ ಸೇವೆ ಮಾಡುತ್ತಿರುವ ಕೆ.ವಿ.ಪೈ ಮತ್ತು ಬಾಲಕೃಷ್ಣ ಪೈ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುಧಾಕರ್ ಶೆಟ್ಟಿಯವರ ಪತ್ನಿ ಗೀತಾ, ಪುತ್ರ ಅಭಿಜೀತ್, ನಗರಸಭಾ ಸದಸ್ಯರಾಗಿರುವ ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ರಾವ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಅರ್ಚಕ ವೇ ಮೂ ದಿವಾಕರ ಭಟ್, ರಾಧಾಕೃಷ್ಣ ನಂದಿಲ, ನಾಗೇಶ್ ರಾವ್, ಹರಿಪ್ರಸಾದ್ ನೆಲ್ಲಿಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.