ರಾಮಕುಂಜ (ದ.ಕ): ಕಡಬ ತಾಲೂಕಿನ ರಾಮಕುಂಜ ಗ್ರಾಮದ ನೀರಾಜೆ ಎಂಬ ಮನೆಯೊಂದರಲ್ಲಿ ಮತ್ತು ಆತೂರು ಡಿಲೈಟ್ ಚಿಕನ್ ಸೆಂಟರ್ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಕಡಬ ಪೋಲಿಸರು ಮಾಂಸವನ್ನು ವಶಪಡಿಸಿಕೊಂಡು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಓರ್ವ ಪರಾರಿಯಾಗಿದ್ದಾನೆ. 23 ಕೆ.ಜಿ. ಮಾಂಸ ವಶಪಡಿಸಿಕೊಂಡ ಪೋಲಿಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ರಾಮಕುಂಜ ಗ್ರಾಮದ ಆತೂರು ಡಿಲೈಟ್ ಚಿಕನ್ ಸೆಂಟರ್ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಡಬ ಪೋಲಿಸರು ಚಿಕನ್ ಸೆಂಟರ್ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಮಾಲೀಕ, ರಾಮಕುಂಜ ನಿವಾಸಿ ಮಹಮ್ಮದ್ ಎಂಬವವರನ್ನು ವಶಕ್ಕೆ ಪಡೆದು, 9 ಕೆ.ಜಿ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನೀರಾಜೆ ಎಂಬಲ್ಲಿರುವ ಸಿರಾಜ್ ಎಂಬಾತನ ಮನೆಗೆ ದಾಳಿ ನಡೆಸಿದ ಪೋಲಿಸರು ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 14 ಕೆ.ಜಿ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಸಿರಾಜ್ ಪರಾರಿಯಾಗಿದ್ದಾರೆ. ಈ ಬಗ್ಗೆ ಸಿರಾಜ್ ವಿರುದ್ದ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಕಡಬ ಎಸ್.ಐ.ರುಕ್ಮ ನಾಯ್ಕ್, ಸಿಬ್ಬಂದಿಗಳಾದ ಭವಿತ್ ರೈ, ಶ್ರೀ ಶೈಲ, ಮಹೇಶ್, ಸೋಮಯ್ಯ ಭಾಗವಹಿಸಿದ್ದರು.