ಮಂಗಳೂರು : ಕರಾವಳಿ ಜಿಲ್ಲೆಗಳಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಶೈಕ್ಷಣಿಕವಾಗಿ ಸದಾ ಮುಂದಿವೆ. ಆದರೆ, ಕರಾವಳಿಯ ವಿದ್ಯಾರ್ಥಿಗಳು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಗಮನಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪೊಲೀಸ್ ಇಲಾಖೆ, ಸರ್ಕಾರದ ವಿವಿಧ ಇಲಾಖೆಯ ಅತ್ಯುನ್ನತ ಹುದ್ದೆಗಳಲ್ಲಿ ಕರಾವಳಿಯ ಮಂದಿ ಕಾಣಿಸುವುದೇ ಇಲ್ಲ. ಇದಕ್ಕೆ ಕಾರಣ ಇಲ್ಲಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಕರ್ಷಿತರಾಗದಿರುವುದು. ವಿದ್ಯಾಭ್ಯಾಸದಲ್ಲಿ ಸದಾ ಮುಂದೆ ಇರುವ ಕರಾವಳಿಗರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಉತ್ತೇಜನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮಂಗಳೂರಿನ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗಾಗಿ ಕಾರ್ಯಾಗಾರವೊಂದನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ನಗರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದರು. ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಈ ಕಾರ್ಯಾಗಾರದಲ್ಲಿ ನಗರದ ವಿವಿಧ ಕಾಲೇಜಿನ 600-700 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಎಸ್ಪಿ ಋಷಿಕೇಶ್ ಸೋನಾವಾಣೆ, ಪುತ್ತೂರು ಡಿಎಸ್ಪಿ ಗಾನಾ ಪಿ.ಕುಮಾರ್, ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ತಾವು ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವ ಬಗೆಗಿನ ಅನುಭವವನ್ನು ವಿದ್ಯಾರ್ಥಿಗಳ ಮುಂದಿಟ್ಟರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಪ್ರೋತ್ಸಾಹವನ್ನು ಈ ಮೂಲಕ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಬರೆದು ಇಲಾಖೆಗೆ ಸೇರ್ಪಡೆಗೊಂಡ 6 ಮಂದಿ ಪೊಲೀಸ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ಈ ಮೂಲಕ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಗೆ ಯಾವ ರೀತಿ ಸಿದ್ಧತೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಈವರೆಗೆ ಇಂತಹ ತರಬೇತಿ ಕಾರ್ಯಾಗಾರ ನಡೆದಿರಲಿಲ್ಲ. ಪೊಲೀಸ್ ಕಮಿಷನರ್ ಅವರ ವಿಶೇಷ ಮುತುವರ್ಜಿಯಿಂದ ಈ ರೀತಿಯ ಕಾರ್ಯಾಗಾರ ಆಯೋಜನೆಗೊಂಡಿದೆ.
ಓದಿ : ಹೊಸಪೇಟೆಯಲ್ಲಿ 'ಅಪ್ಪು' ಪುತ್ಥಳಿ ಅನಾವರಣಕ್ಕೆ ರಾಘವೇಂದ್ರ ರಾಜ್‌ಕುಮಾರ್ ಆಗಮನ!