ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಸರಣಿ ಕೊಲೆ ಬಳಿಕ ವಿಧಿಸಲಾಗಿದ್ದ ನೈಟ್ ಕರ್ಫ್ಯೂ ಸಡಿಲಿಕೆ ಬಳಿಕ ರಾತ್ರಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪ್ರಯಾಣಿಸುವ ಪುರುಷ ಸವಾರರಿಗೆ ನಿರ್ಬಂಧ ಹೇರಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ: ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಸರಣಿ ಹತ್ಯೆ ಸಂಬಂಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ನೈಟ್ ಕರ್ಫ್ಯೂ ಇದೆ. ಇದು ಕೊನೆಗೊಂಡ ಬಳಿಕ ರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಹಿಂಬದಿ ಯುವ ಪುರುಷ ಸವಾರರಿಗೆ ನಿರ್ಬಂಧ ಹೇರಲಾಗುವುದು.
ರಾತ್ರಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪ್ರಯಾಣಿಸುವ ಪುರುಷ ಸವಾರರಿಗೆ ನಿರ್ಬಂಧ ಆದೇಶವು ಆಗಸ್ಟ್ 5ರಿಂದ ಆಗಸ್ಟ್ 8ರವರೆಗೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಮಹಿಳೆಯರು, 18 ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಯಾರೂ ಕೂಡ ಓಡಾಡುವಂತಿಲ್ಲ. ಎಲ್ಲಾ ಮಾದರಿಯ ದ್ವಿಚಕ್ರ ವಾಹನಕ್ಕೂ ಕೂಡ ಈ ಆದೇಶ ಅನ್ವಯವಾಗಲಿದೆ.
ಮಹಿಳೆಯರು, ಮಕ್ಕಳು ಮತ್ತು ಹಿರಿಯರಿಗೆ ಇದರಿಂದ ವಿನಾಯಿತಿ ನೀಡಲಾಗುವುದು. ಈ ರೀತಿ ಹಿಂದೆ ಕೇರಳದ ವಯನಾಡಿನಲ್ಲಿ ಮಾಡಲಾಗಿತ್ತು. ಅಲ್ಲಿ ಎಲ್ಲಾ ಪುರುಷ ಸವಾರರಿಗೆ ನಿರ್ಬಂಧ ಹೇರಲಾಗಿತ್ತು. ಇಲ್ಲಿ ಹಿಂಬದಿ ಸಂಚರಿಸುವ ಪುರುಷ ಸವಾರರಿಗೆ ಮಾತ್ರ ನಿರ್ಬಂಧ ಹೇಳಲಾಗುತ್ತದೆ ಎಂದರು.
ಇನ್ನೂ ಕೇರಳ ಗಡಿಯಲ್ಲಿ ನಿಗಾ ಇಡುವ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವ, ಡಿಜಿ ಅವರು ಸಲಹೆ ನೀಡಿದ್ದು, ಅದರಂತೆ ಜಿಲ್ಲೆಯ 18 ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಅಲ್ಲಿ ಸಿಸಿಟಿವಿ ಅಳವಡಿಸಿ, ಕೆಎಸ್ಆರ್ಪಿ ಸಿಬ್ಬಂದಿ ನಿಯೋಜಿಸಿ ನಿಗಾ ಇಡಲಾಗುವುದು. ಇದು ಇನ್ನೂ ಒಂದು ವರ್ಷ ಇರಲಿದೆ ಎಂದರು.
ಇದನ್ನೂ ಓದಿ: ಮಂಗಳೂರು ಕೊಲೆ ಪ್ರಕರಣಗಳು: ಎಡಿಜಿಪಿ ನೇತೃತ್ವದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ
ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳು: ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳು ಯಾರೆಂದು ಗೊತ್ತಾಗಿದೆ. ಸಂಚು ರೂಪಿಸಿದವರು, ಕೊಲೆ ಮಾಡಿದ್ದು ಯಾರು ಎಂದು ಗೊತ್ತಾಗಿದೆ. ಆ ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ. ಈ ಪ್ರಕರಣವನ್ನು ಯಾವಾಗ ಎನ್ಐಎ ಗೆ ಹಸ್ತಾಂತರ ಮಾಡಬೇಕೆಂಬುದರ ಬಗ್ಗೆ ನಿರ್ಧರಿಸುತ್ತೇವೆ. ಅದಕ್ಕೂ ಮುಂಚೆ ಆರೋಪಿಗಳನ್ನು ಕರ್ನಾಟಕ ಪೊಲೀಸರು ಬಂಧಿಸಲಿದ್ದಾರೆ ಎಂದರು.