ಮಂಗಳೂರು: ರಾಜ್ಯದಲ್ಲಿ ಆನ್ಲೈನ್ ಗೇಮ್ ನಿಷೇಧ ಮಾಡುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆನ್ಲೈನ್ ಗೇಮ್ಗಳ ಮೂಲಕ ಸಾಕಷ್ಟು ಜನರು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್ಲೈನ್ ಗೇಮ್ಗಳನ್ನು ನಿಷೇಧ ಮಾಡಲು ಚಿಂತಿಸಲಾಗಿದೆ ಎಂದರು.
ಮಂಗಳೂರಿನಲ್ಲಿ ಮಾದಕ ವಸ್ತು ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪೊಲೀಸ್ ಆಯುಕ್ತರನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಆಯುಕ್ತರ ಉತ್ತರದಿಂದ ಸಮಾಧಾನಗೊಳ್ಳದ ಮುಖ್ಯಮಂತ್ರಿಗಳು, ಗೂಂಡಾಕಾಯ್ದೆ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರು. ಅನೈತಿಕ ಪೊಲೀಸ್ಗಿರಿ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಗುಂಪು, ಯಾವುದೇ ಸಿದ್ಧಾಂತದವರು ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್ಗಿರಿ ನಡೆಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಸ್ಪಷ್ಟ ಸೂಚನೆ ನೀಡಿದರು.
ಮಳೆಯಿಂದ ಪೂರ್ತಿ ಹಾನಿಯಾದ ಮನೆಗಳಿಗೆ 5 ಲಕ್ಷ ಪರಿಹಾರಕ್ಕೆ ಇಂದೇ ಆದೇಶ ಹೊರಡಿಸುತ್ತೇನೆ. ಮೊದಲಿದ್ದ ರೀತಿಯಲ್ಲೇ ಎ, ಬಿ, ಸಿ ಕೆಟಗರಿಯಲ್ಲಿ ವಿಂಗಡಿಸಿ ಪರಿಹಾರ ನೀಡುತ್ತೇವೆ. ಕಡಲಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲು ತೀರ್ಮಾನಿಸಿದ್ದೇವೆ. ಕಡಲ ಕೊರೆತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ಸಮಗ್ರ ಚರ್ಚೆ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಸುಶಿಕ್ಷಿತರ ಜಿಲ್ಲೆ ಮಂಗಳೂರು ಶಿಕ್ಷಣ ಸೂಚ್ಯಂಕದಲ್ಲಿ ಕುಸಿಯುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಸಿಎಂ, ಈ ಬಗ್ಗೆ ಡಿಡಿಪಿಐ ಅವರಿಂದ ವಿವರಣೆ ಕೇಳಿದರು. ಉಡುಪಿ, ಮಂಗಳೂರು ಯಾವಾಗಲೂ ಪ್ರಥಮ, ದ್ವಿತೀಯ ಸ್ಥಾನದಲ್ಲಿ ಇರುತ್ತಿತ್ತು. ಈಗೇಕೆ ಹೀಗೆ? ಅತ್ಯಂತ ಹಿಂದುಳಿದ ಜಿಲ್ಲೆ ಚಿತ್ರದುರ್ಗವು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವ ಹೊತ್ತಲ್ಲಿ ಅತ್ಯಂತ ಮುಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಹಿಂದುಳಿಯಲು ಕಾರಣ ಏನು? ಡಿಡಿಪಿಐ ಆದವರು ಬಿಇಒಗಳನ್ನು ಈ ಬಗ್ಗೆ ಪ್ರಶ್ನಿಸಬೇಕು ಎಂದರು.
ಆರೋಗ್ಯ ಸೂಚ್ಯಂಕದಲ್ಲೂ ಕುಸಿದಿದೆ. ದ.ಕ ಜಿಲ್ಲೆ 2015ರಲ್ಲಿ 3ನೇ ಸ್ಥಾನದಲ್ಲಿತ್ತು. ಈಗ 23ನೇ ಸ್ಥಾನಕ್ಕೆ ಕುಸಿದಿದೆ, ಏಕೆ ? ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಿಎಂ ಪ್ರಶ್ನಿಸಿದರು. ಎರಡು ವರ್ಷಗಳಿಂದ ಏನೂ ಪ್ರಗತಿ ಸಾಧಿಸಲಿಲ್ಲ ಏಕೆ?. ತಾಯಿ ಮಕ್ಕಳ ಮರಣ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದಕ್ಕೆ ಎಂ.ಎಂ.ಆರ್ ಸಮೀಕ್ಷೆಯ ವರದಿಯನ್ನು ಓದಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಇನ್ನು ಮುಂದೆ ಅವರಿಗೆ ನೀಡಿದ ಕ್ವಾಟ್ರಸ್ಗಳಲ್ಲೇ ನೆಲೆಸುವಂತೆ ಕ್ರಮ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಆಗಬಾರದು. ಒಮ್ಮೆ ಬಿತ್ತನೆ ಬೀಜ, ರಸಗೊಬ್ಬರ ಕೊಟ್ಟರೆ ಮುಗಿಯಿತು ಎಂದು ಅಧಿಕಾರಿಗಳು ವರ್ತಿಸಬಾರದು. ಬೆಳೆ ಹಾನಿಯಾಗಿ ಮತ್ತೆ ಬೀಜ, ರಸಗೊಬ್ಬರಕ್ಕೆ ರೈತರಿಂದ ಬೇಡಿಕೆ ಬಂದರೆ ಅದನ್ನೂ ಪೂರೈಸಬೇಕು ಎಂದು ಸಿಎಂ ತಾಕೀತು ಮಾಡಿದರು.
ಮೀನುಗಾರರ ದೋಣಿಗೆ ರಿಯಾಯಿತಿ ದರದಲ್ಲಿ ಡೀಸೆಲ್: ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್ನಿಂದ 2 ಲಕ್ಷ ಕಿಲೋ ಲೀಟರ್ವರೆಗೆ ಹೆಚ್ಚಿಸಿದ್ದೇವೆ. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳಷ್ಟು ನೆರವು ನೀಡಿದ್ದೇವೆ. ಇದು ಮೀನುಗಾರ ಸಮುದಾಯಕ್ಕೆ ತಲುಪುತ್ತದೆಯೇ ಎಂದು ಸಿಎಂ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಇದರಿಂದ ಸಮುದಾಯಕ್ಕೆ ದೊಡ್ಡ ಅನುಕೂಲವಾಗಿದೆ ಎಂದು ಉತ್ತರಿಸಿದರು. ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್ಗಳನ್ನು ಪೆಟ್ರೋಲ್ ಇಂಜಿನ್ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗುವುದು ಎಂದು ನಾವು ಆಯವ್ಯಯದಲ್ಲಿ ಘೋಷಿಸಿದ್ದೇವೆ. ಈ ಕಾರ್ಯಕ್ರಮ ಸರಿಯಾಗಿ ಜಾರಿಯಾವಂತೆ ಕ್ರಮ ವಹಿಸಲು ಅಧಿಕಾರಿಗಳು ಸಿಎಂ ಸೂಚಿಸಿದರು.
ಶಕ್ತಿ ಯೋಜನೆಯಿಂದ ಜನರು ಮತ್ತು ವಿದ್ಯಾರ್ಥಿ ಸಮೂಹದಿಂದ ಉತ್ತಮ ಸ್ಪಂದನೆ ಇರುವುದರಿಂದ ಸದ್ಯದಲ್ಲೇ 4,000 ಹೆಚ್ಚುವರಿ ಬಸ್ಗಳನ್ನು ಖರೀದಿಸುವುದಾಗಿ ಸಿಎಂ ತಿಳಿಸಿದರು. ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳ ಲಾಭವು ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗೂ ದೊರಕುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯು ಆರೋಗ್ಯ ಮತ್ತು ಶಿಕ್ಷಣದಲ್ಲಿ ಅತ್ಯಂತ ಹಿಂದುಳಿಯುತ್ತಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಿಎಂ ತರಾಟೆ ತೆಗೆದುಕೊಳ್ಳುತ್ತಿದ್ದಾಗ ಮಧ್ಯ ಪ್ರವೇಶಿಸಿದ ಶಾಸಕ ಉಮಾನಾಥ ಕೋಟ್ಯಾನ್ ಅವರು, ಗ್ರಾಮ ಪಂಚಾಯತಿ ಕಟ್ಟಡವೊಂದರ ಉದ್ಘಾಟನೆ ತಡೆ ಹಿಡಿದಿದ್ದರ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿಎಂ, ಯಾವುದೇ ಕಾರಣಕ್ಕೂ ಪ್ರೋಟೋಕಾಲ್ ಉಲ್ಲಂಘನೆ ಆಗಬಾರದು. ಶಾಸಕರು ಯಾವುದೇ ಪಕ್ಷದವರಿರಲಿ, ಅವರನ್ನು ಅಧಿಕಾರಿಗಳು ಜನಪ್ರತಿನಿಧಿಗಳೆಂದು ಪರಿಗಣಿಸಿ ಅವರಿಗೆ ಗೌರವ ಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಇದನ್ನೂ ಓದಿ: ಉಳ್ಳಾಲ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ.. ಮುಖ್ಯಮಂತ್ರಿ ಸಿದ್ದರಾಮಯ್ಯ