ಹಾವೇರಿ/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ವಾಹನವೊಂದು ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಬಿದ್ದಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ವೇಳೆ ಮನೆಯ ಒಳಗೆ ಮಹಿಳೆ ಮಲಗಿದ್ದು, ವಾಹನ ಮನೆ ಮೇಲೆ ಬಿದ್ದ ಕಾರಣ ಅಡಿಯಲ್ಲಿ ಮಹಿಳೆ ಸಿಲುಕಿಕೊಂಡಿದ್ದಾರೆ. ವಾಹನವನ್ನು ತೆರವು ಮಾಡಲಾಗದೇ ಇದ್ದ ಕಾರಣ ಮಹಿಳೆಯನ್ನು ಹೊರ ತೆಗೆಯಲು ಸಾಧ್ಯವಾಗಿಲ್ಲ. ವಿಷಯ ತಿಳಿದು ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬಂದಿದ್ದು, ಕ್ರೇನ್ ಮೂಲಕ ಪಿಕಪ್ ವಾಹನ ತೆರವು ಕಾರ್ಯಾಚರಣೆ ನಡೆಸಿದರು.
ಕಂಟೇನರ್ ಲಾರಿ ಪಲ್ಟಿ: ಚಾಲಕ ನಿಯಂತ್ರಣ ತಪ್ಪಿ ಕಂಟೇನರ್ ಲಾರಿ ಪಲ್ಟಿಯಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಮದೋಡ್ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ಕಂಟೇನರ್ ಪಲ್ಟಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ ಬೈಕಗೆ ಡಿಕ್ಕಿ ಹೊಡೆದು, ರಸ್ತೆಯ ಡಿವೈಡರ್ ದಾಟಿ ಮತ್ತೊಂದು ರಸ್ತೆಗೆ ಬಿದ್ದಿದೆ. ಘಟನೆಯಲ್ಲಿ ಬೈಕ್ ಸವಾರ ಸಂತೋಷ ಗಾಯಗೊಂಡಿದ್ದಾರೆ. ಹರಿಹರದಿಂದ ರಾಣೇಬೆನ್ನೂರುಗೆ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು ಹಲಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿತ್ತು. ಬಸ್ ಚಾಲಕ ಸದಾನಂದ (50) ಮತ್ತು ಪ್ರಯಾಣಿಕ ರಾಹುಲ್ (22) ಮೃತರಾಗಿದ್ದರು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಬೆಂಗಳೂರಿನಿಂದ ಮೀರಜ್ಗೆ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿತ್ತು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಸ್ ಪಲ್ಟಿಯಾಗಿದ್ದರಿಂದ ಚಾಲಕ ಹಾಗೂ ಪ್ರಯಾಣಿಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಆನೆಕಲ್ನಲ್ಲಿ ಮಿಲ್ಕಿ ಮಿಸ್ಟ್ ಕಂಟೈನರ್ ರಸ್ತೆ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಹಾಗೂ ಕ್ಲೀನರ್ ಸಾವನ್ನಪ್ಪಿದ್ದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಚಾಲಕ ನಿದ್ರಾ ಸ್ಥಿತಿಯಲ್ಲಿ ವಾಹನ ಚಾಲನೆ ಮಾಡಿದ್ದರಿಂದ ಘಟನೆ ಸಂಭವಿಸಿತ್ತು. ಅಪಘಾತದಲ್ಲಿ ತಮಿಳುನಾಡಿನ ಈರೋಡಿನ ಚಾಲಕ ಕಾರ್ತಿಕೇಯನ್ ಹಾಗು ಕ್ಲೀನರ್ ಉದಯ್ ಕುಮಾರ್ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಎರಡೂ ಪ್ರತ್ಯೇಕ ಅಪಘಾತ.. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ.. ಮಹಿಳೆ ಸಾವು, ಇಬ್ಬರಿಗೆ ಗಂಭೀರ ಗಾಯ