ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ಸಮೀಪದ ಪೆರಾಜೆ ಗ್ರಾಮದ ಕಲ್ಲುಚರ್ಪೆ ಬಳಿ ಬಸ್ಗಾಗಿ ಕಾಯುತ್ತಿದ್ದ ನಾಲ್ವರು ಯುವಕರ ಮೇಲೆ ಪಿಕಪ್ ವಾಹನ ಹರಿದು, ಇಬ್ಬರು ಗಂಭೀರವಾಗಿ ಗಾಯಗೊಂಡು ಓರ್ವ ಮೃತಪಟ್ಟ ಘಟನೆ ನಡೆದಿದೆ.
ಮಾರ್ಚ್ 10ರಂದು ಇಲ್ಲಿನ ದುಗಲಡ್ಕ ನಿವಾಸಿಗಳಾದ ರಫೀಕ್, ಮುರ್ಷಾದ್, ಸತೀಶ್, ಉಮ್ಮರ್ ಎಂಬುವರು ತೊಡಿಕಾನದಲ್ಲಿ ಅಡಿಕೆ ಮರ ಕಡಿಯುವ ಕೆಲಸ ನಿರ್ವಹಿಸಿ ಸಾಯಂಕಾಲ ತಮ್ಮ ಮನೆಗೆ ತೆರಳಲು ಪೆರಾಜೆ ಕಲ್ಲುಚರ್ಪೆ ಬಳಿ ಬಸ್ಗೆ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಪಿಕಪ್ ವಾಹನ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಅಲ್ಲೇ ಸಮೀಪದಲ್ಲಿ ನಿಂತಿದ್ದ ಈ ನಾಲ್ವರ ಮೇಲೆ ಹರಿದಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಸತೀಶ್, ಮುರ್ಷಾದ್ ಹಾಗೂ ಉಮ್ಮರ್ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಓದಿ:ಗೋಡಂಬಿ ಗಂಟಲಿನಲ್ಲಿ ಸಿಲುಕಿ ಮೂರೂವರೆ ವರ್ಷದ ಮಗು ಸಾವು
ಮಂಗಳೂರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಗಂಭೀರ ಗಾಯಗೊಂಡಿದ್ದ ಕೊಳಂಜಿಕೋಡಿಯ ಹಸೈನಾರ್ ಎಂಬುವರ ಪುತ್ರ ಮುರ್ಷಾದ್ ಮೃತಪಟ್ಟಿದ್ದಾರೆ. ಪಿಕಪ್ ವಾಹನ ಚಾಲಕ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.