ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ತೋಟಗಾರಿಕೆ, ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಅವರು ಭೇಟಿ ನೀಡಿ, ಅಡಿಕೆ ತೋಟಗಳ ಎಲೆ ಚುಕ್ಕಿ ಮತ್ತು ಎಲೆ ರೋಗ ಬಾಧಿತ ಪ್ರದೇಶಗಳನ್ನು ಪರಿಶೀಲನೆ ನಡೆಸಿದರು.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ರೋಗ ಬಾಧಿತ ನಾಲ್ಕು ಕೃಷಿಕರ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು, ರೈತರ ಅಹವಾಲುಗಳನ್ನು ಆಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಈ ಭಾಗದ ಎಲೆ ಚುಕ್ಕಿ, ಅಡಿಕೆ ಎಲೆ ರೋಗ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಸರ್ಕಾರದಿಂದ ಈಗಾಗಲೇ ಕೆಮಿಕಲ್ ಸಿಂಪಡಣೆ ಮಾಡೋದಕ್ಕೆ 4 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಇನ್ನೂ 15 ಕೋಟಿಯ ಶಿಫಾರಸುಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ಇದಕ್ಕಿಂತ ಎಲ್ಲಾ ಮಿಗಿಲಾಗಿ ಈ ರೋಗಗಳು ಯಾಕೆ ಬರುತ್ತಿವೆ ಎಂಬ ಬಗ್ಗೆ ಸಂಶೋಧನೆ ಆಗಬೇಕಿದೆ. ಅದಕ್ಕಾಗಿ ಮುಂದಿನ ತಿಂಗಳು ಇಸ್ರೇಲ್ ಗೆ ಹೋಗುತ್ತಿದ್ದೇನೆ. ಅಲ್ಲಿನ ವಿಜ್ಞಾನಿಗಳ ಜೊತೆಗೆ ಚರ್ಚೆ ಮಾಡಿ ಒಂದು ಪರಿಹಾರ ಕಂಡುಕೊಳ್ಳಬಹುದು ಎಂದರು.
ರೈತರೊಂದಿಗೆ ನಾವು ಇದ್ದು, ಪರಿಹಾರ ಹುಡುಕಬೇಕಿದೆ. ಈಗ ಮಾಡುತ್ತಿರುವುದು ತಾತ್ಕಾಲಿಕ ಪರಿಹಾರಗಳು. ಇನ್ನು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಚಿವ ಮುನಿರತ್ನ ತಿಳಿಸಿದರು. ಈ ವೇಳೆ ಸಚಿವ ಎಸ್ ಅಂಗಾರ ಸೇರಿದಂತೆ ಅಧಿಕಾರಿಗಳು, ಕೃಷಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ:ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ರಾತ್ರಿ ಸುತ್ತಾಡುತ್ತಿದ್ದ ಜೋಡಿ ಮೇಲೆ ಹಲ್ಲೆ ಯತ್ನ