ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಚುನಾವಣಾ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದರು.
ಪಿಲಿಚಂಡಿ ಕಲ್ಲು ಕುವೆಟ್ಟು ನಿವಾಸಿಗಳಾದವ ಮೊಹಮ್ಮದ್ ಅರ್ಷದ್(22), ದಾವೂದ್(36), ಇಸಾಕ್(28) ಬಂಧಿತ ಆರೋಪಿಗಳು. ಈ ಬಗ್ಗೆ ನಿನ್ನೆಯೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 99/20 ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ ಘೋಷಣೆಯ ಬಗ್ಗೆ ದೂರು ದಾಖಲಾಗಿರುವ ಚಿತ್ರಿತ ವಿಡಿಯೋ ಅಲ್ಲದೆ ಇನ್ನೂ ಎರಡು ವಿಡಿಯೋ ಹಾಗೂ ಘೋಷಣೆ ಕೂಗಿರುವುದನ್ನು ದಾಖಲೆ ಮಾಡಿರುವ ಮೊಬೈಲ್ ಫೋನ್ ಕೂಡಾ ದೊರಕಿದೆ. ಆ ವಿಡಿಯೋವನ್ನು ತಾಂತ್ರಿಕವಾಗಿ ವಿಶ್ಲೇಷಣೆಗೆ ಒಳಪಡಿಸಿದಾಗ ಪಾಕಿಸ್ತಾನ ಪದ ಬಳಕೆ ಮಾಡಿರುವುದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನೂ ಯಾರಾದರೂ ಈ ಕೃತ್ಯದಲ್ಲಿ ಭಾಗವಹಿಸಿರುವುದು ಕಂಡು ಬಂದಲ್ಲಿ ಅವನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಹೊಸ ವರ್ಷಾಚರಣೆ ನೆಪದಲ್ಲಿ ಗುಂಪು ಸೇರವುದಕ್ಕೆ ತಡೆ:
ಲಕ್ಷ್ಮೀಪ್ರಸಾದ್ ವರ್ಷಾಚರಣೆಯ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಆದೇಶ ನೀಡಲಾಗಿದೆ. ಯಾವುದೇ ರೀತಿಯಲ್ಲಿ ದೊಡ್ಡ ಪ್ರಮಾಣದ ಗುಂಪುಗಳು ಸೇರಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಆಯೋಜನೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಅಕಸ್ಮಾತ್ ಹೊಸವರ್ಷಾಚರಣೆ ಮಾಡುವುದಾದಲ್ಲಿಯೂ ಹಾಲ್ಗಳ ಅರ್ಧ ಭಾಗದಲ್ಲಿ ಮಾತ್ರ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಲಕ್ಷ್ಮೀಪ್ರಸಾದ್ ತಿಳಿಸಿದರು.
ಮದ್ಯಪಾನ ಸೇವಿಸಿ ವಾಹನ ಚಲಾಯಿಸದಂತೆ ವಿಶೇಷ ತಪಾಸಣೆ ಮಾಡಲು ಪೊಲೀಸ್ ತಂಡವನ್ನು ನಿಯೋಜನೆ ಮಾಡಲಾಗಿದೆ. ಆದ್ದರಿಂದ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಹೊಸ ವರ್ಷಾಚರಣೆ ಮಾಡಬೇಕು. ಅಲ್ಲದೆ ಕೊರೊನಾ ನಿಯಮಗಳನ್ನು ಪಾಲಿಸಿ ಪಾರ್ಟಿಗಳನ್ನು ಆಯೋಜಿಸಬೇಕೆಂದು ಎಲ್ಲರಲ್ಲಿ ವಿನಂತಿ ಮಾಡುತ್ತೇನೆ ಎಂದು ಅವರು ಹೇಳಿದರು.