ಮಂಗಳೂರು(ದಕ್ಷಿಣ ಕನ್ನಡ): ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟ ಯುವಕರಿಬ್ಬರ ಅಂಗಾಂಗಗಳ ದಾನ ಮಾಡಿದ ಘಟನೆ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ. ಇಬ್ಬರು ಯುವಕರ ಅಂಗಾಂಗಗಳ ದಾನದಿಂದ 11 ಮಂದಿಗೆ ಜೀವದಾನ ದೊರೆತಂತಾಗಿದೆ.
ನಗರದ ಉರ್ವ ನಿವಾಸಿಯಾಗಿದ್ದ ನೀಲ್ (39) ಎಂಬವರು ಡಿ. 3ರಂದು ಉಪ್ಪಳದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರಿಗೆ ಡಿ. 9ರಂದು ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದದ್ದರು. ಹೀಗಾಗಿ ನೀಲ್ ಅವರ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿದ್ದರು.
ಅದರಂತೆ ಒಂದು ಕಿಡ್ನಿಯನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು - ಆಸ್ಪತ್ರೆಗೆ, ಇನ್ನೊಂದು ಕಿಡ್ನಿಯನ್ನು ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಲಿವರ್ ಮತ್ತು ಕಾರ್ನಿಯಾವನ್ನು ರವಾನಿಸಲಾಗಿದೆ.
ಮೂಡಿಗೆರೆ ಅಪಘಾತ ಪ್ರಕರಣ: ಮೂಡಿಗೆರೆಯ ಧನ್ಯ ಕುಮಾರ್ (37) ಎಂಬವರು ಡಿ. 8ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಬ್ಬೇನಹಳ್ಳಿ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕ್ಯಾಂಟರ್‌ವೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಡಿ. 9ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಪೋಷಕರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ.
ಅದರಂತೆ ಲಿವರ್ ಅನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ, ಹೃದಯ ಮತ್ತು ಶ್ವಾಸಕೋಶವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ, ಕಿಡ್ನಿಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ, ಕಾರ್ನಿಯಾಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ, ಚರ್ಮವನ್ನು ಮಣಿಪಾಲ ಕೆಎಂಸಿಯ ಸ್ಕಿನ್ ಬ್ಯಾಂಕ್‌ಗೆ ರವಾನಿಸಲಾಗಿದೆ ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ: ಲಿವರ್ ಕಸಿ ಮಾಡಿ ತಾಯಿ ಮಗಳ ಜೀವ ಉಳಿಸಿದ ವೈದ್ಯ.. ಧನ್ಯವಾದ ತಿಳಿಸಿದ ಪೋಷಕರು!