ಮಂಗಳೂರು: ಬೆಂಗಳೂರು ಮೂಲದ ವಯೋವೃದ್ಧೆಯೊಬ್ಬರು ಮಂಗಳೂರಿಗೆ ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವುದನ್ನು ಕಂಡ ಪಣಂಬೂರು ಬೀಚ್ನ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಮಹಿಳೆ ತನ್ನ ವಿವರವನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ತನ್ನ ಹೆಸರು ವೆಂಕಟಮ್ಮ, ಬೆಂಗಳೂರು ಮೂಲದವರೆಂದು ಹೇಳುತ್ತಿದ್ದಾರೆ. ಸುಮಾರು 60ರಿಂದ 65 ವರ್ಷ ಹರೆಯದ ಇವರನ್ನು ರಕ್ಷಿಸಿ ದಕ್ಷಿಣ ಕನ್ನಡ ಮತ್ತು ಕೇರಳದ ಗಡಿ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸ್ನೇಹಾಲಯಕ್ಕೆ ಸೇರಿಸಲಾಗಿದೆ. ಮಂಗಳವಾರ ಪಣಂಬೂರು ಬೀಚ್ ಬಳಿ ಸುಳಿದಾಡುತ್ತಿದ್ದ ಇವರು ಸಮುದ್ರಕ್ಕೆ ಹಾರಲು ಯತ್ನಿಸಿದ್ದರು. ಆಗ ಅವರನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಅಭಿಜಿತ್ ಮತ್ತು ಲಿಖಿತ್ ಅವರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ಅವರನ್ನು ಸ್ನೇಹಾಲಯಕ್ಕೆ ಸೇರಿಸಲಾಗಿದೆ.
ಮಹಿಳೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಪಣಂಬೂರು ಬೀಚ್ನಲ್ಲಿದ್ದ ಸ್ಥಳೀಯರು ಮತ್ತು ಲೈಫ್ ಗಾರ್ಡ್ ಸಿಬ್ಬಂದಿಯಿಂದ ಅವರ ಪ್ರಾಣ ಉಳಿದಿದೆ.