ಮಂಗಳೂರು: ಜನನಿಬಿಡ ನಗರ ಪ್ರದೇಶದಲ್ಲಿ ಅಂತಸ್ತಿನ ಮನೆಗಳು, ಮಹಡಿಗಳಂತಹ ಮನೆಗಳ ನಡುವೆ ಪುಟ್ಟದಾದ ಗುಡಿಸಲು. ತಲೆ ಬಗ್ಗಿಸಿಕೊಂಡು ಗುಡಿಸಲಿನ ಒಳಗೆ ಕಾಲಿಡಬೇಕು. ಮಣ್ಣಿನ ನೆಲ, ಆಗಲೋ ಈಗಲೋ ಮುರಿದು ಬೀಳಲಿರುವ ಮರದ ರೀಪುಗಳು, ಮಣ್ಣಿನಲ್ಲಿ ಕಟ್ಟಿದ ಗೋಡೆ, ಅಡುಗೆ ಮಾಡಲು ಕಟ್ಟಿಗೆಯ ತುಂಡುಗಳು ಇಂತಹ ಪರಿಸ್ಥಿತಿಯಲ್ಲಿ ಆ ಗುಡಿಸಲಿನಲ್ಲಿ ಒ೦ಟಿ ಹಿರಿಜೀವ ಬದುಕು ಕಳೆಯುತ್ತಿದೆ.
ಈ ದೃಶ್ಯಗಳು ಕಂಡು ಬಂದಿದ್ದು, ಸುರತ್ಕಲ್ನಲ್ಲಿ. ನಗರದ ರೈಲ್ವೇ ಬ್ರಿಡ್ಜ್ ಬಳಿಯಿರುವ ಹಲವಾರು ಮನೆಗಳ ನಡುವೆ ಆ ಪುಟ್ಟದಾದ ಗುಡಿಸಲಿನಲ್ಲಿ ಸುಮಾರು 15 ವರ್ಷಗಳಿಂದ ಒಬ್ಬ೦ಟಿಯಾಗಿ ಬದುಕುತ್ತಿರುವ ಹಿರಿಯ ಜೀವದ ಹೆಸರು ವಿಠಲ ಪೂಜಾರಿ ವಯಸ್ಸು 65 ವರ್ಷ. ಸುರತ್ಕಲ್ ಭಾಗದಲ್ಲಿ ಮೊದಲು ಕೈಗಾಡಿಯ ವೃತ್ತಿಯನ್ನು ನಡೆಸುತ್ತಾ ಕಾಲಕ್ರಮೇಣ ಕೈಗಾಡಿಯ ವೃತ್ತಿಯು ಕ್ಷೀಣಿಸಿದ ಸಂದರ್ಭದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಲು ಶುರು ಮಾಡಿದರು.
ಈ ಬಗ್ಗೆ ಜೀವ ವಿಠಲ ಪೂಜಾರಿ ಮಾತನಾಡಿ, ಸುಮಾರು 15 ವರ್ಷಗಳಿಂದ ಈ ಗುಡಿಸಲ್ಲಿ ವಾಸವಾಗಿದ್ದೇನೆ. ಆದರೆ ಇದೀಗ ಯಾವುದೇ ಕೆಲಸವಿಲ್ಲದೇ ಬಹಳ ಕಷ್ಟವಾಗಿದೆ.ಇಲ್ಲಿಯವರೆಗೂ ಯಾವ ರಾಜಕೀಯ ನಾಯಕರು ಸರಿಯಾದ ವ್ಯವಸ್ಥೆ ಕಲ್ಪಿಸಲಿಲ್ಲ. ಹೇಗಾದರೂ ಮಾಡಿ ಗುಡಿಸಲನ್ನು ಕಟ್ಟಿಕೊಟ್ಟರೆ ಸಾಕು ಎಂದಿದ್ದಾರೆ.
15 ವರ್ಷಗಳಿಂದ ಒಬ್ಬ೦ಟಿಯಾಗಿ ವಾಸವಿರುವ ಇವರಿಗೆ ಹೆಂಡತಿ ಹಾಗೂ 5 ಮಕ್ಕಳಿದ್ದು, ಅವರೀಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಲಾಕ್ಡೌನ್ ಬಳಿಕ ಯಾವುದೇ ಕೂಲಿ ಕೆಲಸವಿಲ್ಲದೇ ನೆರೆಹೊರೆಯವರು ನೀಡಿದ ದಿನಸಿ ಸಾಮಾಗ್ರಿಗಳನ್ನು ಬಳಸಿಕೊಂಡು ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಗುಡಿಸಲಿನಲ್ಲಿ ವಿದ್ಯುಚ್ಛಕ್ತಿಯ ವ್ಯವಸ್ಥೆಯೊಂದಿದ್ದು ಒ೦ಟಿಯಾಗಿ ಬದುಕು ಸವೆಸುತ್ತಿದ್ದಾರೆ.ಮಳೆಗಾಲ ಶುರುವಾಗುವುದಕ್ಕೂ ಮೊದಲು ಗುಡಿಸಲು ತೆರವುಗೊಳಿಸಿ ಹಿರಿಯ ಜೀವಕ್ಕೆ ಸೂಕ್ತ ಸೂರು ಒದಗಿಸಿದರೆ ನೆಮ್ಮದಿಯ ಬದುಕು ಕಾಣಲು ಸಾಧ್ಯ.