ಮಂಗಳೂರು: ವಾಣಿಜ್ಯ ಬೆಳೆಯಾಗಿರುವ ಅಡಿಕೆ ಹಾನಿಕರವಲ್ಲ ಎಂದು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ. ಅಲ್ಲದೆ ಕ್ಯಾಂಪ್ಕೊ ಸಹಯೋಗದೊಂದಿಗೆ ಅಡಿಕೆಯಲ್ಲಿನ ಔಷಧೀಯ ಗುಣಗಳ ಬಗ್ಗೆ ವಿವಿಧ ಸಂಶೋಧನಾ ಸಂಸ್ಥೆಗಳು ಶೋಧ ನಡೆಸುತ್ತಿದೆ. ಆದರೆ ಸರ್ಕಾರಿ ಕೃಷಿ ಮಾಹಿತಿ ಜಾಲತಾಣದಲ್ಲಿ ಕೃಷಿ ಉತ್ಪನ್ನಗಳ ದರ ಪ್ರಕಟಿಸುವ ವ್ಯವಸ್ಥೆಯಲ್ಲಿ ಅಡಿಕೆಯನ್ನು ಮಾದಕದ್ರವ್ಯಗಳ ಪಟ್ಟಿಯಲ್ಲಿ ಸೇರಿಸಿರುವುದು ಆತಂಕಕಾರಿ ಎಂದು ಕ್ಯಾಂಪ್ಕೊ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕ್ಯಾಂಪ್ಕೊ, ಅಡಿಕೆ ಹಾನಿಕರವಲ್ಲವೆಂದು ಪುರಾಣಗಳಲ್ಲೂ ಉಲ್ಲೇಖವಿದೆ. ಅಡಿಗೆಯಲ್ಲಿ ಕ್ಯಾನ್ಸರ್ ಕಾರಕ ಗುಣಗಳಿಲ್ಲವೆಂದು ಕಾಸರಗೋಡು ಸಿಪಿಸಿಆರ್ ಐ ಸಂಸ್ಥೆಯ ಅಧ್ಯಯನಾತ್ಮಕ ವರದಿ ದೃಢಪಡಿಸಿದೆ. ಅಲ್ಲದೆ ಕರಾವಳಿಯ ಆರ್ಥಿಕತೆಯು ಅಡಿಕೆ ಬೆಳೆಯ ಮೇಲೆಯೇ ನಿಂತಿದ್ದು, ಸರ್ಕಾರಿ ಕೃಷಿ ಜಾಲತಾಣದಲ್ಲಿ ಅಡಿಕೆಯನ್ನು ಮಾದಕದ್ರವ್ಯಗಳ ಸಾಲಿಗೆ ಸೇರಿಸಿರುವುದು ಖಂಡನೀಯ ಎಂದಿದೆ.
ಓದಿ :ಕುಡಿದ ಅಮಲಿನಲ್ಲಿ ನಿಂತಿದ್ದ ಸ್ಕೂಟರ್ ಮೇಲೆ ಆಟೋ ಹತ್ತಿಸಿದ ಚಾಲಕ
ಆದ್ದರಿಂದ ಸರ್ಕಾರಿ ವ್ಯವಸ್ಥೆಯಲ್ಲಿ ಕಂಡು ಬಂದಿರುವ ಈ ಲೋಪಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹಾಗೂ ರಾಷ್ಟ್ರೀಯ ಆಹಾರ ಸುರಕ್ಷಾ ಪ್ರಾಧಿಕಾರದ ಅನುಸೂಚಿಯಂತೆ ಅಡಿಕೆಯನ್ನು ಒಣಹಣ್ಣು ಮತ್ತು ಬೀಜಗಳು ಎಂಬ ಪಟ್ಟಿಗೆ ಸೇರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸುವಂತೆ ಕ್ಯಾಂಪ್ಕೊ ಒತ್ತಾಯಿಸಿದೆ. ಇದೀಗ ಕ್ಯಾಂಪ್ಕೊ ಒತ್ತಾಯಕ್ಕೆ ಮಣಿದ ಇಲಾಖೆ ಅಡಿಕೆಯನ್ನು ತೋಟಗಾರಿಕಾ ಉತ್ಪನ್ನವೆಂದು ಪರಿಗಣಿಸಿದೆ.