ಮಂಗಳೂರು: ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಟ್ವೀಟ್ ಅಭಿಯಾನ ನಡೆಸಿದ್ದ ಜೈ ತುಳುನಾಡು ಸಂಘಟನೆ ನಿನ್ನೆ ಮತ್ತೆ ತುಳುವರಿಗೆ ಅವರ ಮಾತೃಭಾಷೆ ತುಳುವಿನಲ್ಲಿಯೇ ಶಿಕ್ಷಣ ನೀಡಬೇಕೆಂಬ ಹಕ್ಕೊತ್ತಾಯದ ಟ್ವೀಟ್ ಅಭಿಯಾನ ನಡೆಸಿದೆ.
ಆ.15ರ ತಡರಾತ್ರಿ 12ರಿಂದ ಆ.16ರ ತಡರಾತ್ರಿ 12ರವರೆಗೆ ಈ ಟ್ವೀಟ್ ಅಭಿಯಾನ ನಡೆದಿದ್ದು, ಸುಮಾರು 83 ಸಾವಿರಕ್ಕೂ ಅಧಿಕ ಮಂದಿ ಟ್ವೀಟ್ ಮಾಡುವ ಮೂಲಕ ತುಳುಭಾಷೆಯಲ್ಲಿಯೇ ಶಿಕ್ಷಣ ದೊರೆಯಬೇಕೆಂದು ಹಕ್ಕೊತ್ತಾಯ ಮಾಡಿದ್ದಾರೆ. ಬಹುದೊಡ್ಡ ಯುವ ಸಮೂಹ ಈ ಟ್ವೀಟ್ ಅಭಿಯಾನದಲ್ಲಿ ಭಾಗವಹಿಸಿದ್ದು, ಅಲ್ಲದೆ ಕನ್ನಡದ ನವರಸ ನಾಯಕ ಜಗ್ಗೇಶ್, 'ದಿಯಾ' ಖ್ಯಾತಿಯ ನಟ ಪೃಥ್ವಿ ಅಂಬರ್, ತುಳು ಚಿತ್ರನಟ ರೂಪೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕ್ಯಾ. ಗಣೇಶ್ ಕಾರ್ಣಿಕ್ ಮುಂತಾದವರು ಟ್ವೀಟ್ ಮಾಡುವ ಮುಖೇನ ಬೆಂಬಲ ಸೂಚಿಸಿದ್ದಾರೆ.
ಲಿಪಿಯೇ ಇಲ್ಲದ ಅದೆಷ್ಟೋ ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ನೀಡಿ ಶಿಕ್ಷಣ ನೀಡಲಾಗುತ್ತಿದೆ. ಆದರೆ ತುಳು ಭಾಷೆಗೆ ತನ್ನದೇ ಆದ ಲಿಪಿ ಇದೆ. ಅದರಲ್ಲಿಯೇ ಶಿಕ್ಷಣ ನೀಡಿ ಎಂಬ ಟ್ವಿಟ್ಟಿಗರರೊಬ್ಬರ ಟ್ವೀಟ್ಗೆ ಬೆಂಬಲ ಸೂಚಿಸಿರುವ ನವರಸ ನಾಯಕ, ಪರವಾಗಿಲ್ಲ ನಾನು ಕೂಡಾ ತುಳುಭಾಷೆಗಾಗಿ ನಿನ್ನೊಂದಿಗೆ ಬರುವೆ ಎಂದು ತುಳುವಿನಲ್ಲಿಯೇ ಟ್ವೀಟ್ ಮಾಡಿದ್ದಾರೆ.
ಜಗ್ಗೇಶ್ ಅವರ ಈ ಟ್ವೀಟ್ 191 ರೀಟ್ವೀಟ್ ಆಗಿದ್ದು, 595 ಮಂದಿ ಟ್ವಿಟ್ಟಿಗರು ಲೈಕ್ ಮಾಡಿದ್ದಾರೆ. ಅದೇ ರೀತಿ 78 ಮಂದಿ ಜಗ್ಗೇಶ್ ಅವರ ಪ್ರೋತ್ಸಾಹದ ನುಡಿಗೆ ಫುಲ್ ಖುಷ್ ಆಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಈ ಟ್ವೀಟ್ ಅಭಿಯಾನದಲ್ಲಿ ವಿವಿಧ ರೀತಿಯಲ್ಲಿ ತಮ್ಮ ತುಳು ಅಭಿಮಾನವನ್ನು ಸೂಚಿಸಿದ್ದು, ತುಳು ಲಿಪಿಯಲ್ಲಿ ಯಡಿಯೂರಪ್ಪ, ನರೇಂದ್ರ ಮೋದಿಯವರ ಹೆಸರು ಬರೆದು ಟ್ವೀಟ್ ಮಾಡಿದ್ದರೆ, ಒಬ್ಬರು ರಾಷ್ಟ್ರಗೀತೆಯನ್ನು ತುಳು ಲಿಪಿಯಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ.
2009ರಲ್ಲಿ ತುಳುವನ್ನು ಅಧಿಕೃತ ರಾಜ್ಯ ಭಾಷೆಯಾಗಿ ಮಾಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿರುವುದನ್ನು ಟ್ವೀಟ್ ಮೂಲಕ ನೆನಪಿಸಲಾಗಿದೆ. ಅಲ್ಲದೆ ಈ ಬಾರಿ ಆಡಳಿತ ಪಕ್ಷದಲ್ಲಿರುವ ಯಾವುದೇ ಶಾಸಕರು, ಸಂಸದರು, ಸಚಿವರು ಟ್ವೀಟ್ ಮಾಡಿ ಬೆಂಬಲ ಸೂಚಿಸದಿರುವುದರ ಬಗ್ಗೆಯೂ ನೆಟ್ಟಿಗರಿಂದ ಖಂಡನೆ ವ್ಯಕ್ತವಾಗಿದೆ.
ಈ ಬಗ್ಗೆ ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿಯನ್ನು ಘೋಷಣೆ ಮಾಡಿದ್ದು, 2021ರಿಂದ ಇದು ಜಾರಿಯಾಗುವ ನಿರೀಕ್ಷೆ ಇದೆ. ಈ ನೀತಿಯ ಪ್ರಕಾರ ಮಗು ಕನಿಷ್ಠ 5ನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂಬ ಉಲ್ಲೇಖವಿದೆ. ಅದಕ್ಕೆ ನಾವು #EducationalTulu ಮೂಲಕ ಟ್ವೀಟ್ ಅಭಿಯಾನ ನಡೆಸಿದ್ದೆವು. ಇದಕ್ಕೆ ತುಳುವರು ಸೇರಿ ಚಿತ್ರನಟರು, ಕರಾವಳಿಯ ಮುಖಂಡರು ಬೆಂಬಲಿಸಿದ್ದಾರೆ ಎಂದು ಹೇಳಿದರು.