ಮಂಗಳೂರು: ಕೊರೊನಾ ವೈರಸ್ ಸೋಂಕು ಶಂಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ನಾಪತ್ತೆಯಾಗಿ ಬಳಿಕ ಪತ್ತೆಯಾದ ವ್ಯಕ್ತಿ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಈವರೆಗೆ 49 ಮಂದಿ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 10 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು. ಇವರಲ್ಲಿ 7 ಮಂದಿಯ ವರದಿ ಬಂದಿದ್ದು, ಯಾರಲ್ಲೂ ಕೊರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣ ಮತ್ತು ಬಂದರಿನಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದೆ. ಹಡಗಿನಲ್ಲಿ ಬರುವ ಪ್ರಯಾಣಿಕರಿಗೆ ಮಂಗಳೂರು ಪ್ರವೇಶ ನಿಷೇಧಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿದಿನ 2 ಅಂತರರಾಷ್ಟ್ರೀಯ ವಿಮಾನಗಳು ಬರುತ್ತಿದ್ದು, ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ತಪಾಸಣೆ ನಡೆಸಲಾಗುತ್ತದೆ ಎಂದರು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಜ್ವರ, ಕೆಮ್ಮು, ಶೀತ ಕಂಡುಬಂದರೆ ಮಾತ್ರ ವೈದ್ಯಕೀಯ ನಿಗಾ ಇಡಲಾಗುತ್ತಿದೆ. ಜಿಲ್ಲೆಗೆ ಬಂದ ವಿದೇಶಿ ಪ್ರಯಾಣಿಕರು 14 ದಿನಗಳ ಕಾಲ ಆರೋಗ್ಯದ ಬಗ್ಗೆ ನಿಗಾ ಇರಿಸಬೇಕು. ಯಾವುದೇ ಸಮಸ್ಯೆ ಬಂದಲ್ಲಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.