ಉಳ್ಳಾಲ: ಎರಡು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವಕನೋರ್ವ ಸೋಮವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕುಂಪಲದಲ್ಲಿ ನಡೆದಿದೆ.
ಕುಂಪಲ ಬಳಿಯ ಬಾರ್ದೆ ನಿವಾಸಿ ಲವಿತ್ ಕುಮಾರ್ (34)ಸಾವನ್ನಪ್ಪಿರುವ ದುರ್ದೈವಿ. ಎಲೆಕ್ಟ್ರಿಷಿಯನ್ ವೃತ್ತಿ ನಡೆಸುತ್ತಿದ್ದ ಲವಿತ್ ಕುಮಾರ್ ಕಳೆದ ಜನವರಿ 18 ರಂದು ಸವಿತಾರನ್ನು ವಿವಾಹವಾಗಿದ್ದರು. ನಿನ್ನೆ ರಾತ್ರಿ ಲವಿತ್ ಅವರಿಗೆ ತೀವ್ರ ಎದೆ ನೋವು ಕಾಣಿಸಿದ್ದು, ಕೂಡಲೇ ತೊಕ್ಕೊಟ್ಟಿನ ನೇತಾಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಲವಿತ್ ಕೊನೆಯುಸಿರೆಳೆದಿದ್ದಾರೆ.
ಲವಿತ್ ಅವರ ಅಕಾಲಿಕ ಮರಣದಿಂದಾಗಿ ಆಘಾತಕ್ಕೊಳಗಾಗಿರುವ ತಾಯಿ, ಪತ್ನಿ , ತಮ್ಮನ ಆಕ್ರಂದನ ಮುಗಿಲು ಮುಟ್ಟಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ.