ಮಂಗಳೂರು : ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಪತ್ರಿಕೆಗಳು ತತ್ತರಿಸುತ್ತಿವೆ. ಸಾಕಷ್ಟು ಪತ್ರಕರ್ತರು ಉದ್ಯೋಗ ಕಳೆದುಕೊಂಡರು. ಆದರೆ, ಪತ್ರಿಕೆಗಳ ಭವಿಷ್ಯ ಮಸುಕಾಗಿಲ್ಲ. ಖಂಡಿತಾವಾಗಿಯೂ ಒಂದು ವರ್ಷದ ಬಳಿಕ ಮತ್ತೆ ಚೇತರಿಸಿಕೊಳ್ಳುತ್ತವೆ ಎಂದು ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮ ಈಗಾಗಲೇ ವೆಬ್ ಜರ್ನಲಿಸಂನತ್ತ ವಾಲುತ್ತಿದೆ. ಅದಕ್ಕಾಗಿ ಹೊಸದಾಗಿ ಬರುವ ಪತ್ರಕರ್ತರು ತಮ್ಮ ಪ್ರತಿಭೆಯನ್ನು ಬಹುಮುಖ ಕೌಶಲಗಳ ಮೂಲಕ ವಿಸ್ತಾರ ಮಾಡಿಕೊಂಡಲ್ಲಿ ಅವಕಾಶಗಳ ಕೊರತೆ ಉಂಟಾಗುವುದಿಲ್ಲ ಎಂದು ಹೇಳಿದರು.
ಯೂಟ್ಯೂಬ್, ಟಿವಿ ಮಾಧ್ಯಮಗಳಲ್ಲದೆ ಪತ್ರಿಕೋದ್ಯಮ, ವೆಬ್ ಪತ್ರಿಕೋದ್ಯಮ ಆಗಮಿಸಿದೆ. ಜಾಹೀರಾತುಗಳು ಈಗ ಹಂಚಿ ಹೋಗುತ್ತಿವೆ. ಇದರಿಂದ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಹಾಗಾಗಿ ಮಾಲೀಕರು ಪತ್ರಕರ್ತರನ್ನು ಕೆಲಸದಿಂದ ಏಕಾಏಕಿ ತೆಗೆಯುತ್ತಿದ್ದಾರೆ ಎಂದರು.
ಸಂಘದ ವತಿಯಿಂದ ಪತ್ರಕರ್ತರಿಗೆ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯ ಮೊಹಮ್ಮದ್ ಅನ್ಸಾರ್ ಅವರಿಗೆ ಪ್ರದಾನ ಮಾಡಲಾಯಿತು.