ಸುಳ್ಯ(ದಕ್ಷಿಣ ಕನ್ನಡ): ಬಹುಕೋಟಿ ಯೋಜನೆಯಾದ ಶಿರಾಡಿ ಘಾಟ್ ವಿಭಾಗದ ಮಾರನಹಳ್ಳಿ ಅಡ್ಡಹೊಳೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 1976 ಕೋಟಿ ರೂ. ಮೊತ್ತದ ಬಿಡ್ ಅನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಜಲ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬಿಡ್ ಆಹ್ವಾನಕ್ಕೆ ಮುಹೂರ್ತ ಫಿಕ್ಸ್.. ಬಹುಕೋಟಿ ರಸ್ತೆ ಯೋಜನೆಯಾದ ಈ ಚತುಷ್ಪಥ ಕಾಮಗಾರಿಯು ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಶಿರಾಡಿ ಘಾಟ್ ಟನಲ್ ನಿರ್ಮಾಣ ಯೋಜನೆಯನ್ನು 15,000 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 23 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಇದೇ ಏಪ್ರಿಲ್ 2023ರ ಒಳಗೆ ಡಿಪಿಆರ್ ಅನ್ನು ಅಂತಿಮಗೊಳಿಸುವಂತೆ ಮತ್ತು ಮೇ 2023 ರಲ್ಲಿ ಬಿಡ್‌ಗಳನ್ನು ಆಹ್ವಾನಿಸುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಸಕಲೇಶಪುರ ಮಾರನಹಳ್ಳಿ ರಸ್ತೆಗೂ ಕಾಯಕಲ್ಪ.. ಮಾತ್ರವಲ್ಲದೇ ಸಕಲೇಶಪುರ ಮಾರನಹಳ್ಳಿ ಭಾಗದ ರಸ್ತೆಯನ್ನು ಸುಗಮ ಸಂಚಾರಕ್ಕಾಗಿ ದುರಸ್ತಿ ಮಾಡಲು ನಿರ್ಧರಿಸಲಾಗಿದ್ದು, ದುರಸ್ತಿ ಕಾಮಗಾರಿಗೆ 12.20 ಕೋಟಿ ರೂ. ಬಿಡ್‌ನ ಮೌಲ್ಯಮಾಪನ ಮಾಡಲಾಗುತ್ತಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ರಸ್ತೆಯ ನಿರ್ವಹಣೆಗೆ ಗುತ್ತಿಗೆದಾರರು ಪ್ಯಾಚ್ ವರ್ಕ್ ದುರಸ್ತಿಗೆ ಮುಂದಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ದ್ವಿಪಥವಿರುವ ಶಿರಾಡಿ ಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದರು.
ಶಿರಾಡಿ ಘಾಟ್ ರಸ್ತೆ ರಾಜ್ಯದ ಜೀವನಾಡಿ ಇದ್ದಂತೆ. ಈಗಿರುವ ರಸ್ತೆ ಕಿರಿದಾಗಿದೆ. ಇದನ್ನು ನಾಲ್ಕು ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಸಮ್ಮತಿಸಿದ ಕೇಂದ್ರ ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಹ ಅವರು ಹೇಳಿದ್ದರು. ಸದ್ಯ ಈ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಬಿಡ್ ಅನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಸ್ಕೂಟಿ ಕಲಿಸಲು ಬಂದು ಮನೆಗೆ ಕನ್ನ ಆರೋಪ.. ಮೈಸೂರಲ್ಲಿ ಟ್ರೈನರ್ ಸೇರಿ ಮೂವರು ಮಹಿಳೆಯರು ವಶಕ್ಕೆ