ಮಂಗಳೂರು: ಮೊಟ್ಟೆ, ಶಾಲೆಯ ಮಕ್ಕಳ ಊಟದ ಮೂಲಕ ಕಮೀಷನ್ ಪಡೆದ ಕಾಂಗ್ರೆಸ್ ಪಕ್ಷದವರು ದಾಖಲೆ ನೀಡದೆ ಇನ್ನೊಂದು ಸರ್ಕಾರವನ್ನು 40% ಸರ್ಕಾರವೆಂದು ಹೇಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40% ಕಮಿಷನ್ ಸರ್ಕಾರ ಎಂದು ಆರೋಪ ಮಾಡುವ ವಿಚಾರದಲ್ಲಿ ಸಾಕ್ಷಿಗಳು ಏನಿದೆ? ದಾಖಲೆಗಳು ಇದ್ದರೆ ಕೊಡಲಿ. ಜಯಮಾಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಹಣ ಕೊಡಲು ಮೊಟ್ಟೆಯಲ್ಲಿ ಹಣ ಮಾಡಿದವರು. ಅದನ್ನು ಅವರು ಹೇಳಿರುವುದು ಮಾಧ್ಯಮದಲ್ಲಿ ಬಂದಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷ 80% ಸರ್ಕಾರವಾಗಿದ್ದು, ಅವರು ನೆರೆ ಸಂಗ್ರಹದ ಹಣವನ್ನೇ ಲೂಟಿ ಮಾಡಿದವರು. ಕಾಂಗ್ರೆಸ್ ನವರಿಗೆ ನೈತಿಕತೆ ಇದ್ದರೆ ಸಾಕ್ಷ್ಯ ಕೊಡಲಿ. ಕೆಂಪಣ್ಣ ಸುಮ್ಮನೆ ಮಾತನಾಡುವ ಬದಲು ದಾಖಲೆ ಬಹಿರಂಗಪಡಿಸಲಿ ಎಂದರು.
ಇನ್ನು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಬೆದರಿಕೆ ಪತ್ರ ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಅವರಿಗೆ ಭದ್ರತೆಯನ್ನು ಕೊಡುತ್ತದೆ ಎಂದು ತಿಳಿಸಿದರು.
ಗಣೇಶೋತ್ಸವಕ್ಕೆ ಅವಕಾಶ: ಈದ್ಗಾ ಮೈದಾನ ಸರ್ಕಾರಿ ಸ್ಥಳವಾಗಿದ್ದು, ಅಲ್ಲಿ ಗಣೇಶ ಪ್ರತಿಮೆ ಇಡಬಹುದು. ಸ್ಥಳೀಯಾಡಳಿತಕ್ಕೆ ಅರ್ಜಿ ಕೊಟ್ಟಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೊಡಲಾಗುತ್ತದೆ. ಸರ್ಕಾರಿ ಜಾಗದಲ್ಲಿ ಮಾಡಲು ಬಿಡಲ್ಲ ಅನ್ನೋದಕ್ಕೆ ಅದು ಯಾರಪ್ಪನ ಆಸ್ತಿಯೂ ಅಲ್ಲ. ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಓದಿ: 21 ಟ್ರಸ್ಟ್ ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಸದಸ್ಯರ ನೇಮಕ.. ಸರ್ಕಾರದಿಂದ ಆದೇಶ ವಾಪಸ್