ಸುಬ್ರಹ್ಮಣ್ಯ: ನಾಳೆ ನಾಗರಪಂಚಮಿ ದಿನದಂದು ದೇವರ ದರ್ಶನಕ್ಕೆ ಅವಕಾಶ ಇಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಪ್ರತಿವರ್ಷ ನಾಗರ ಪಂಚಮಿ ದಿನದಂದು ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಆತಂಕವಿದ್ದು, ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆ ದೇವರ ದರ್ಶನಕ್ಕೆ ಯಾವುದೇ ಅವಕಾಶ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಭಕ್ತಾದಿಗಳಿಂದ ಹಾಲು, ಸಿಯಾಳ, ಹಣ್ಣುಕಾಯಿ ಸೇರಿದಂತೆ ಯಾವುದೇ ಪೂಜಾ ಸಾಮಗ್ರಿಗಳನ್ನು ಸ್ವೀಕರಿಸಲಾಗುವುದಿಲ್ಲ. ಸಾಮಾಜಿಕ ಅಂತರ ಕಾಪಾಡಲು ಕಷ್ಟಕರವಾಗುವ ಕಾರಣದಿಂದಾಗಿ ಈ ಕ್ರಮ ತಗೆದುಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಎಲ್ಲ ಭಕ್ತರ ಪರವಾಗಿ ದೇವಸ್ಥಾನದ ಅರ್ಚಕರೇ ದೇಗುಲದಲ್ಲಿ ಸಂಪ್ರದಾಯದಂತೆ ಪೂಜೆ ನಡೆಸಲಿದ್ದು, ಭಕ್ತರು ತಮ್ಮ ತಮ್ಮ ಮನೆಯಲ್ಲೇ ಪೂಜೆ ನೆರವೇರಿಸಿ ಹಬ್ಬ ಆಚರಿಸುವಂತೆಯೂ ವಿನಂತಿ ಮಾಡಲಾಗಿದೆ.