ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಬಟ್ಟೆ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿರುವುದಕ್ಕೆ ಮುಸ್ಲಿಂ ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ. ಆದ್ದರಿಂದ ಮುಸ್ಲಿಂ ವ್ಯಾಪಾರಿಗಳು ಕೆಟಿಎ ಯೂತ್ ಫೋರಂ ಸಂಘಟನೆಯು ಹಂಪನಕಟ್ಟೆ ಸುತ್ತಲಿನ ಸುಮಾರು 300 ಮಳಿಗೆಗಳನ್ನು ರಂಜಾನ್ ಈದ್ ಉಲ್ ಫಿತ್ರ್‌ವರೆಗೆ ತೆರೆಯದಿರಲು ನಿರ್ಧರಿಸಿವೆ.
ಈ ಬಗ್ಗೆ ಅಡ್ಡೂರು ಮಸೀದಿಯ ಆಡಳಿತ ಮಂಡಳಿ ಧ್ವನಿವರ್ಧಕಗಳ ಮೂಲಕ, ಯಾರೂ ಹಬ್ಬದ ನೆಪದಲ್ಲಿ ಬಟ್ಟೆ ಖರೀದಿಸಲು ಹೋಗಬಾರದು. ನಿಯಮ ಮೀರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಇದೇ ರೀತಿಯಲ್ಲಿ ಎಲ್ಲಾ ಮಸೀದಿಗಳಲ್ಲಿಯೂ ಜಾಗೃತಿ ಮೂಡಿಸುವ ಸಾಧ್ಯತೆ ಇದೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಂ ವ್ಯಾಪಾರಿಗಳು ಕೈಗೊಂಡ ನಿರ್ಧಾರಕ್ಕೆ ಎಲ್ಲರು ಬೆಂಬಲ ನೀಡಿದ್ದಾರೆ. ಆದ್ದರಿಂದ ಹಂಪನಕಟ್ಟೆಯ ಮೂರು ವಾಣಿಜ್ಯ ಸಂಕೀರ್ಣಗಳ ಮತ್ತು ಸುತ್ತಲಿನ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಇತ್ಯಾದಿ ಮಳಿಗೆಗಳನ್ನು ತೆರೆಯದಿರಲು ನಿರ್ಧರಿಸಲಾಗಿದೆ.
ಕೆಟಿಎ ಯೂತ್ ಫೋರಂ ಅಧ್ಯಕ್ಷ ಮೌಶಿರ್ ಅಹ್ಮದ್ ಮಾತನಾಡಿ, ಇದು ಕೋವಿಡ್-19 ವಿರುದ್ಧದ ಹೋರಾಟಕ್ಕೆ ನಾವು ನೀಡುತ್ತಿರುವ ಬೆಂಬಲವಾಗಿದೆ. ಜಿಲ್ಲಾಡಳಿತ ಏನು ನಿರ್ಧಾರ ಕೈಗೊಳ್ಳುತ್ತದೋ ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಮುಂದಿನ ನಿರ್ಣಯ ಕೈಗೊಳ್ಳವವರೆಗೆ ನಾವು ಯಾರೂ ಬಟ್ಟೆ ಮಳಿಗೆಗಳನ್ನು ತೆರೆಯುವುದಿಲ್ಲ ಎಂದರು.
ಈ ಪೈಕಿ ಹೆಚ್ಚಿನ ಮಳಿಗೆಗಳು ಹಂಪನಕಟ್ಟೆಯ ಕುನೀಲ್ ಸೆಂಟರ್, ಟೋಕಿಯೊ ಮಾರ್ಕೆಟ್, ಅಕ್ಬರ್ ಕಾಂಪ್ಲೆಕ್ಸ್‌ಗಳಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮುಸ್ಲಿಂ ವ್ಯಾಪಾರಿಗಳು ಇದನ್ನು ಅನುಸರಿಸಲು ಮುಂದಾಗಿದ್ದಾರೆ. ಆದ್ದರಿಂದ ಈಗಾಗಲೇ ನಾವು ಶಾಸಕ ಯು ಟಿ ಖಾದರ್ ಅವರಿಗೆ ಮನವಿ ಮಾಡಿದ್ದೇವೆ. ಅಲ್ಲದೆ ಉಸ್ತುವಾರಿ ಸಚಿವರಿಗೆ ಈ ಆದೇಶವನ್ನು ಪುನರ್ ಪರಿಶೀಲನೆ ನಡೆಸಲು ಮನವಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.