ಮಂಗಳೂರು: ಮುಲ್ಕಿ ನಗರಾಡಳಿತದ ಸ್ಥಾಯಿ ಸಮಿತಿಯ ಆಯ್ಕೆ ಸಂದರ್ಭದಲ್ಲಿ ತಮಗೆ ಅಧಿಕ ಸ್ಥಾನ ದೊರಕಬೇಕೆಂದು ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿದ ಪರಿಣಾಮ, ಆಯ್ಕೆ ಪ್ರಕ್ರಿಯೆಯೇ ಮುಂದೂಡಿದ ಘಟನೆ ಮುಲ್ಕಿ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಶಾಸಕ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಮುಲ್ಕಿ ನ.ಪಂ.ಅಧ್ಯಕ್ಷ ಸುಭಾಷ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದು, ಈ ಸಂದರ್ಭ ನೂತನ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.
ಮುಲ್ಕಿ ನಗರಾಡಳಿತ ಸ್ಥಾಯಿ ಸಮಿತಿಯ ಆಯ್ಕೆ ವೇಳೆ ಗೊಂದಲ ಮುಲ್ಕಿ ನ.ಪಂ.ಅಧ್ಯಕ್ಷ ಸುಭಾಷ್ ಶೆಟ್ಟಿಯವರು ಬಿಜೆಪಿಯ ಶಾಂತಾ ಕಿರೋಡಿಯನ್, ಶೈಲೇಶ್ ಕುಮಾರ್, ಹರ್ಷರಾಜ್ ಶೆಟ್ಟಿ ಜಿ.ಎಂ., ಹಾಗೂ ಬಿಜೆಪಿ ಬೆಂಬಲಿತ ಜೆಡಿಎಸ್ ಸದಸ್ಯೆ ಲಕ್ಷ್ಮೀಯವರ ಹೆಸರನ್ನು ಅನುಮೋದಿಸಿದ್ದರು. ಕಾಂಗ್ರೆಸ್ನಿಂದ ಬಾಲಚಂದ್ರ ಕಾಮತ್, ಮಂಜುನಾಥ ಕಂಬಾರ ಮತ್ತು ವಿಮಲಾ ಪೂಜಾರಿ ಹೆಸರನ್ನು ಅನುಮೋದನೆ ಮಾಡಿದ್ರು. ಆದರೆ ನಗರಾಡಳಿತದಲ್ಲಿ 9 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ಗೆ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚಿಗೆ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಆದರೆ ಸಭೆ ಇದನ್ನು ಒಪ್ಪಲಿಲ್ಲ.
ಕಾಂಗ್ರೆಸ್ ಸದಸ್ಯರು ಯಾವುದೇ ಕಾರಣಕ್ಕೂ ಅಧಿಕ ಸ್ಥಾನ ನೀಡದೆ ಸಭೆ ಮುಂದುವರಿಯಲು ಬಿಡುವುದಿಲ್ಲ ಎಂದು ಗದ್ದಲವೆಬ್ಬಿಸಿದ ಕಾರಣ ಆಯ್ಕೆ ಪ್ರಕ್ರಿಯೆಯನ್ನು ಮುಂದಿನ ಸಾಮಾನ್ಯ ಸಭೆಗೆ ಮುಂದೂಡಲಾಯಿತು.