ಮಂಗಳೂರು: ಉಳ್ಳಾಲ ತಾಲೂಕಿನ ಸೋಮೇಶ್ವರ ದೇವಸ್ಥಾನದ ಸಮೀಪ ನೈತಿಕ ಪೊಲೀಸ್‌ಗಿರಿ ಪ್ರಕರಣ ವರದಿಯಾಗಿದೆ. ದೇವಸ್ಥಾನದ ಸುತ್ತಮುತ್ತ ಓಡಾಡುತ್ತಿದ್ದ ಕೇರಳ ಮೂಲದ ನಾಲ್ವರು ವಿದ್ಯಾರ್ಥಿಗಳನ್ನು ತಡೆದು ಸಂಘಟನೆಯೊಂದರ ಕಾರ್ಯಕರ್ತರು ವಿಚಾರಿಸಿದ್ದಾರೆ. ವಿದ್ಯಾರ್ಥಿಗಳ ತಂಡದಲ್ಲಿ ಇಬ್ಬರು ಹುಡುಗಿಯರು, ಇಬ್ಬರು ಹುಡುಗರಿದ್ದು, ಇವರು ಉಳ್ಳಾಲದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಂತರ ಕಾರ್ಯಕರ್ತರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕ-ಯುವತಿಯರ ವಿಚಾರಣೆ ನಡೆಸಿ, ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ನೈತಿಕ ಪೊಲೀಸ್‌ಗಿರಿ, ಮೂವರ ಬಂಧನ: ಇತ್ತೀಚಿಗೆ, ಮಂಗಳೂರು ನಗರದಲ್ಲಿ ನೈತಿಕ ಪೊಲೀಸ್‌ಗಿರಿ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು. ಡಿಸೆಂಬರ್ 21ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹಂಪನಕಟ್ಟೆಯ ಗುಡ್ಟೈಮ್ ಶಾರ್ಟ್ ಈಟ್ಸ್ ಶಾಪ್ ಬಳಿ ಕೇರಳದ ಯುವಕ ಮತ್ತು ಯುವತಿಯನ್ನು ವ್ಯಕ್ತಿಯೊಬ್ಬ ತಡೆದಿದ್ದ. ಯುವಕ ಮತ್ತು ಯುವತಿ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾ ಎಂದು ಪರಿಶೀಲಿಸುವ ನೆಪದಲ್ಲಿ ಅವರ ಮೇಲೆ ರೇಗಾಡಿ ಐಡಿ ಕಾರ್ಡ್ ಕೇಳಿದ್ದ ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಯುವಕ ಮತ್ತು ಯುವತಿ ಆಟೋ ರಿಕ್ಷಾವನ್ನು ಹತ್ತಿ ಅಲ್ಲಿಂದ ತೆರಳಲು ಯತ್ನಿಸಿದ್ದರು. ಆಗ ಆಟೋ ನಿಲ್ಲಿಸಲು ಯತ್ನಿಸಿದ ಆರೋಪಿಯು ಆಟೋ ಚಾಲಕನಿಗೂ ಗದರಿಸಿದ್ದ. ಅಷ್ಟರಲ್ಲಿ ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿದ್ದರು.
ಹುಡುಗ ಮತ್ತು ಹುಡುಗಿ ತಮ್ಮನ್ನು ರೈಲ್ವೇ ನಿಲ್ದಾಣಕ್ಕೆ ಡ್ರಾಪ್ ಮಾಡುವಂತೆ ಆಟೋ ಚಾಲಕನಿಗೆ ಕೇಳಿದ್ದರು. ಬಳಿಕ ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದರು.
ಉಪ್ಪಿನಂಗಡಿಯಲ್ಲೂ ಇಂತಹದ್ದೇ ಘಟನೆ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ತಾಲೂಕಿನಲ್ಲೂ ಇತ್ತೀಚೆಗೆ ನೈತಿಕ ಪೊಲೀಸ್‌ಗಿರಿ ಸದ್ದು ಮಾಡಿತ್ತು. ಯುವಕ ಯುವತಿಯನ್ನು ತಡೆದು ನಿಲ್ಲಿಸಿದ ಯುವಕರ ತಂಡವು ಹಲ್ಲೆ ನಡೆಸಿ, ಬೆದರಿಕೆ ಹಾಕಿತ್ತು. ಯುವತಿ ಪರಿಚಿತ ವಿದ್ಯಾರ್ಥಿಯೊಂದಿಗೆ ಇದ್ದುದನ್ನು ನೋಡಿದ ಯುವಕರ ತಂಡವು ತಡೆದು ನಿಲ್ಲಿಸಿತ್ತು. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಆ ತಂಡ ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ಮೆರೆದಿತ್ತು. ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗ: ಫ್ರೀಡಂ ಪಾರ್ಕ್ನಲ್ಲಿ ಯುವಕನಿಗೆ ಚಾಕು ಇರಿತ