ಮಂಗಳೂರು: ಮೋದಿ ಸರ್ಕಾರ ಎರಡನೇ ಅವಧಿಯ ಒಂದು ವರ್ಷ ಪೂರೈಸಿದೆ. ಈ ಸಾಧನೆಯ ಕುರಿತು ಹಾಗೂ ದೇಶದ ಜನರಿಗೆ ಪ್ರಧಾನಿ ಮೋದಿಯವರು ಬರೆದಿರುವ ‘ನೀವು ಪ್ರೇರಕರು ನಾನು ಸೇವಕ’ ಪತ್ರದ ಸಾರಾಂಶವನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 1 ಮನೆಗೆ ಇಬ್ಬರಂತೆ ತೆರಳಿ ಜನತೆಗೆ ಸರ್ಕಾರದ ಸಾಧನೆಯ ಕುರಿತು ತಿಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಈ ಸಂದರ್ಭ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಅವಧಿಯ ಪ್ರಥಮ ವರ್ಷ ಪೂರೈಸುತ್ತಿದ್ದು, ಈ ಸಂದರ್ಭದಲ್ಲಿ ಸರ್ಕಾರ ಕೈಗೆತ್ತಿಕೊಂಡ ಗಟ್ಟಿ ನಿರ್ಧಾರಗಳ ಕುರಿತು ದೇಶದ ಜನತೆಗೂ ಹೆಮ್ಮೆಯಿದೆ. ಸ್ವಾತಂತ್ರ್ಯ ನಂತರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ಧುಗೊಳಿಸುವ ಮೂಲಕ ಜನರಿಗೆ ನೀಡಿದ್ದ ವಾಗ್ದಾನವನ್ನು ಪೂರ್ಣಗೊಳಿಸಿದೆ. ರಾಮ ಮಂದಿರದ ತೀರ್ಪಿನಲ್ಲೂ ಸರ್ಕಾರ ಕೈಗೆತ್ತಿಕೊಂಡ ಕ್ರಮಗಳು ಜನರಿಗೆ ಹೊಸ ಭರವಸೆ ಮೂಡಿಸಿದೆ. ಲಾಕ್ಡೌನ್ ಸಂದರ್ಭ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವ ಮೂಲಕ ಜನರ ಸಂಕಷ್ಟಕ್ಕೆ ಹೆಗಲು ನೀಡಿದೆ. ಸರ್ಕಾರದ ಈ ಎಲ್ಲಾ ಸಾಧನೆಗಳನ್ನು ಮಂಗಳೂರು ನಗರ ದಕ್ಷಿಣದ ಪ್ರತಿ ಮನೆಗೂ ಬಿಜೆಪಿ ಕಾರ್ಯಕರ್ತರು ತಲುಪಿಸುವ ಕಾರ್ಯವಾಗಲಿದೆ ಎಂದರು.
ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಬಿಜೆಪಿ ಮಂಡಲ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಜೆ.ಸುರೇಂದ್ರ, ಬಿಜೆಪಿ ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಕಿರಣ್ ರೈ ಮತ್ತಿರರು ಉಪಸ್ಥಿತರಿದ್ದರು.