ಮಂಗಳೂರು(ದ.ಕ): ನಗರದಲ್ಲಿ ಮಾದಕ ವಸ್ತು ಜಾಲವನ್ನು ಬುಡದಿಂದಲೇ ಅಳಿಸಿ ಹಾಕಲು ಸೂಚನೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಮಕ್ಕಳ ಭವಿಷ್ಯದ ಕುರಿತು ಕನಸು ಕಟ್ಟಿಕೊಂಡಿರುವ ಅನೇಕ ಪೋಷಕರ ಕನಸುಗಳನ್ನು ಡ್ರಗ್ಸ್ ಜಾಲ ಕಸಿದುಕೊಳ್ಳುತ್ತಿದೆ. ಯುವಜನಾಂಗ ಡ್ರಗ್ಸ್, ಗಾಂಜಾ ಕಪಿಮುಷ್ಠಿಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಇದನ್ನೆಲ್ಲ ಮಟ್ಟ ಹಾಕುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದಿದ್ದಾರೆ.
ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದು ಸರ್ಕಾರದ ದೊಡ್ಡ ಜವಾಬ್ದಾರಿಯಾಗಿದ್ದು, ಸರ್ಕಾರ ಇದಕ್ಕೆ ಬದ್ಧವಾಗಿದೆ. ಮಂಗಳೂರು ಜನತೆ ಮಾದಕ ಜಾಲದ ಮಾಹಿತಿ ದೊರಕಿದರೆ ಅದರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ ಅಥವಾ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ. ಅದನ್ನು ಸಂಪೂರ್ಣ ಅಳಿಸಿಹಾಕುವ ದೃಷ್ಟಿಯಲ್ಲಿ ನಮ್ಮೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಭವಿಷ್ಯದ ದಿನಗಳಲ್ಲಿ ಮಾದಕ ದ್ರವ್ಯ ತೊಡೆದುಹಾಕಲು ನಮ್ಮೊಂದಿಗೆ ಸಹಕರಿಸಿ. ಡ್ರಗ್ಸ್ ಮುಕ್ತ ಮಂಗಳೂರು, ಡ್ರಗ್ಸ್ ಮುಕ್ತ ಕರ್ನಾಟಕ, ಡ್ರಗ್ಸ್ ಮುಕ್ತ ಭಾರತಕ್ಕಾಗಿ ನಾವೆಲ್ಲರೂ ಒಂದಾಗಿ ಹೋರಾಡೋಣ. ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸೋಣ ಎಂದು ಶಾಸಕ ಕಾಮತ್ ಕರೆ ನೀಡಿದ್ದಾರೆ.