ಮಂಗಳೂರು/ದಕ್ಷಿಣ ಕನ್ನಡ: ನಗರದ ಪಡೀಲಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಧಿಕಾರಿ ಕಚೇರಿಗೆ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಹೌಸಿಂಗ್ ಬೋರ್ಡ್ ಎಇ, ಗುತ್ತಿಗೆದಾರ ಹಾಗೂ ಇಂಜಿನಿಯರ್ ಜೊತೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕಾಮಗಾರಿಯ ಬಗ್ಗೆ ವಿವರಣೆ ಪಡೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಉಮಾನಾಥ ಕೋಟ್ಯಾನ್ ಮಾತನಾಡಿ, 2018ರಲ್ಲಿ 41 ಕೋಟಿ ರೂ. ಅನುದಾನದಲ್ಲಿ 2.26 ಸಾವಿರ ಸ್ಕ್ವೇರ್ ಫೀಟ್ನ ನೂತನ ಜಿಲ್ಲಾಧಿಕಾರಿ ಕಚೇರಿಯ ಕಾಮಗಾರಿ ಪ್ರಾರಂಭವಾಯಿತು. ಆದರೆ ಇಂದು ಒಳಾಂಗಣ ಕಾಮಗಾರಿ ಹೊರತುಪಡಿಸಿ ಸುಮಾರು 55 ಕೋಟಿ ರೂ.ಗೆ ಏರಬಹುದು ಎಂದು ಹೇಳಿದರು.
ಈ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂದೆ ಒಟ್ಟು 38 ಇಲಾಖೆಗಳು ಹಾಗೂ ಸಂಸದರ ಕಚೇರಿ, ಶಾಸಕರ ಕಚೇರಿ ಮತ್ತು ಉಸ್ತುವಾರಿ ಸಚಿವರ ಕಚೇರಿ ಕಾರ್ಯಾಚರಿಸಲಿದೆ. ಅದಕ್ಕಾಗಿ ಸಂಸದರ, ಶಾಸಕರ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಒಂದು ಸಭೆ ನಡೆಯಲಿದೆ. ಈ ಜಿಲ್ಲಾಧಿಕಾರಿ ಕಚೇರಿಯು ಎಲ್ಲಾ ಜಿಲ್ಲೆಗೆ ಮಾದರಿಯಾಗಬೇಕು. ಅಲ್ಲದೆ ಕಾಮಗಾರಿ ವೇಗ ಪಡೆಯಲು ಸಾಕಷ್ಟು ಹಣದ ಅಗತ್ಯವಿದೆ. ಈಗಾಗಲೇ ಗುತ್ತಿಗೆದಾರರಿಗೆ 36 ಕೋಟಿ ರೂ. ಖರ್ಚಾಗಿದ್ದು, 24 ಕೋಟಿ ರೂ. ಗುತ್ತಿಗೆದಾರರಿಗೆ ಹಣ ಬಂದಿದೆ. ಉಳಿದಂತೆ ಹಂತ ಹಂತವಾಗಿ ಹಣ ನೀಡಲಾಗುವುದು ಎಂದು ಉಮಾನಾಥ ಕೋಟ್ಯಾನ್ ಹೇಳಿದರು.
ಇಲ್ಲಿ ಕಾರ್ಯಾಚರಿಸಲಿರುವ ಆರೋಗ್ಯ ಇಲಾಖೆಯಿಂದ 7 ಕೋಟಿ ರೂ. ಬರಬೇಕು, ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ ರೂ. ಬರಬೇಕು. ಅಲ್ಲದೆ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಮಾರ್ಟ್ ಸಿಟಿಯವರಿಗೆ ನೀಡಿ ಅವರಿಂದ 10 ಕೋಟಿ ರೂ. ಪಡೆಯಲಿದ್ದೇವೆ. ಗುತ್ತಿಗೆದಾರರ ಪ್ರಕಾರ ಈ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳಲು ಒಂದು ವರ್ಷಗಳ ಕಾಲ ಬೇಕಾಗುತ್ತದೆ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.ಈ ಸಂದರ್ಭ ಹೌಸಿಂಗ್ ಬೋರ್ಡ್ ಎಇ ಸಹನಾ, ಗುತ್ತಿಗೆದಾರ ಪ್ರಭಾಕರ ಯೆಯ್ಯಾಡಿ ಹಾಗೂ ಇಂಜಿನಿಯರ್ ಧರ್ಮರಾಜ್ ಮತ್ತಿತರರು ಉಪಸ್ಥಿತರಿದ್ದರು.