ಮಂಗಳೂರು : ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸ್ವಯಂಪ್ರೇರಿತ ವರ್ಗಾವಣೆಗೆ ನಗರಾಭಿವೃದ್ಧಿ ಸಚಿವರೇ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿದೆ ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿ ಏಕಾಏಕಿ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ವರ್ಗಾವಣೆ ಪಡೆಯುತ್ತಿದ್ದಾರೆ. ಇದಕ್ಕೆ ನಗರಾಭಿವೃದ್ಧಿ ಸಚಿವರು ನಡೆಸುತ್ತಿರುವ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿದೆ ಎಂದ್ರು. ಮಂಗಳೂರು ಮನಪಾ(ಮಂಗಳೂರು ನಗರ ಪಾಲಿಕೆ) ಆಯುಕ್ತರು ವರ್ಗಾವಣೆ ಪಡೆದು ಹೊರಬಿದ್ದಿದ್ದಾರೆ. ಮೈಸೂರಿನಲ್ಲಿ ಕೆಲ ಅಧಿಕಾರಿಗಳು ವರ್ಗಾವಣೆ ಪಡೆಯುತ್ತಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಗುತ್ತಿಗೆದಾರರು, ಬಿಲ್ಡರ್ ಗಳಿಂದ ಕಪ್ಪ ಹಣವನ್ನು ವಸೂಲಿ ಮಾಡಲು ಅಧಿಕಾರಿಗಳನ್ನು ಬಳಸುತ್ತಿದ್ದಾರೆ ಎಂಬ ಮಾತುಗಳು ಬಹಳಷ್ಟು ಕೇಳಿ ಬರುತ್ತಿದೆ. ಇದು ಎಷ್ಟು ಸುಳ್ಳು ಎಷ್ಟು ಸತ್ಯ ಎಂಬುವುದು ಬೆಳಕಿಗೆ ಬರಬೇಕಾಗಿದೆ ಎಂದು ಮಿಥುನ್ ರೈ ಹೇಳಿದರು.
ಈ ಬಗ್ಗೆ ನಗರಾಭಿವೃದ್ಧಿ ಸಚಿವರ ಆಪ್ತ ಸಹಾಯಕರನ್ನು ತನಿಖೆ ಮಾಡಿ ಹಾಗೂ ಅವರ ಒಂದು ತಿಂಗಳಿನ ಮೊಬೈಲ್ ಕರೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಲ್ಲಿ ಸತ್ಯ ಹೊರಬರಬಹುದು. ಅವರಿಗೆ ಕಲೆಕ್ಷನ್ ಮಾಡಲು ಅಷ್ಟು ಆಸಕ್ತಿ ಇದ್ದಲ್ಲಿ ಬಿಜೆಪಿಯ ಕಾರ್ಯಕರ್ತರನ್ನು ಬಳಸಿ ಆ ಕೆಲಸ ಮಾಡಿಸಲಿ. ಆದರೆ ಸರಕಾರದ ಅಧಿಕಾರಿಗಳನ್ನು ಈ ಕೆಲಸಗಳಿಗೆ ತೊಡಗಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಸ್ವತಃ ನಗರಾಭಿವೃದ್ಧಿ ಸಚಿವರೇ ತಮ್ಮ ಮೊಬೈಲ್ ಕರೆಯ ದಾಖಲೆಯನ್ನು ಮಾಧ್ಯಮದ ಮುಂದಿರಿಸಿ ಸತ್ಯಾಂಶವನ್ನು ಹೊರಗೆಡಹಿ ಆರೋಪ ಮುಕ್ತರಾಗಲಿ ಎಂದ್ರು.