ಮಂಗಳೂರು : ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಚಿವ ಯು.ಟಿ ಖಾದರ್, ಕಡಲ್ಕೊರೆತಕ್ಕೊಳಗಾದವರಿಗೆ ಗ್ರಾಮೀಣ ಮಟ್ಟದಲ್ಲಿ ಜಾಗ ನೀಡಬೇಕೆಂಬ ಬೇಡಿಕೆ ಇರುವ ಕಾರಣ ಜಾಗದ ಗುರುತಿಸುವಿಕೆಯ ಕೆಲಸ ನಡೆಯುತ್ತಿದೆ ಎಂದರು.
ಈ ಯೋಜನೆ ಮಂಜೂರು ಆಗುವವರೆಗೆ ಕಡಲ್ಕೊರೆತಕ್ಕೆ ಒಳಗಾದವರಿಗೆ ಮನೆ ಬಾಡಿಗೆ ಕೊಡುವ ಯೋಜನೆಯೂ ಇದೆ. ಸದ್ಯ ಕಡಲ್ಕೊರೆತದಿಂದ 150 ಮನೆಗಳು ಅಪಾಯದಲ್ಲಿವೆ ಎಂದು ಸಚಿವ ಖಾದರ್ ಹೇಳಿದರು.
ಬೇರೆಡೆ ಸುಸಜ್ಜಿತ ಮನೆಗಳಿದ್ದರೂ, ಉಳ್ಳಾಲ ಸಮುದ್ರ ತೀರದಲ್ಲಿ ಪರಿಹಾರ ಹಣದ ಆಸೆಗಾಗಿ ನೆಲೆಸಿದವರೂ ಇದ್ದಾರೆ ಎಂಬ ಆರೋಪಗಳಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಉತ್ತಮ ವ್ಯವಸ್ಥೆ ಇರುವವರು ಯಾರೂ ಇಂತಹ ಪರಿಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಈ ಆರೋಪವನ್ನು ನಾನು ನಂಬುವುದಿಲ್ಲ. ಹಾಗೇನಾದರೂ ಇದ್ದರೆ ಅರ್ಹರನ್ನು ಗುರುತಿಸಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜೂ.18 ರಂದು ಕಂದಾಯ ಸಚಿವರ ಸಭೆ:
ದ.ಕ.ಜಿಲ್ಲೆಯ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಂಬಂಧಪಟ್ಟಂತೆ ಜೂನ್ 18ರಂದು ಕಂದಾಯ ಸಚಿವರು ಸಭೆ ನಡೆಸಲಿದ್ದಾರೆ. ಅಂದು ಬೆಳಗ್ಗೆ ಉಡುಪಿಯಲ್ಲಿ ಹಾಗೂ ಮಧ್ಯಾಹ್ನದ ಬಳಿಕ ಮಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಅಲ್ಲದೆ ಪ್ರಾಪರ್ಟಿ ಕಾರ್ಡ್ಗೆ ಸಂಬಂಧಿಸಿದಂತೆ ಯೂ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ. ಜತೆಗೆ ಕಡಲ್ಕೊರೆತದಿಂದ ಮನೆಹಾನಿಯಾದವರಿಗೆ, ಮನೆ ಕಳೆದುಕೊಂಡವರಿಗೆ ಅತೀ ಶೀಘ್ರದಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು. ಕಡಲ್ಕೊರೆತ ಪ್ರದೇಶದಲ್ಲಿ ತಾತ್ಕಾಲಿಕ ಸಂರಕ್ಷಣಾ ಕಾಮಗಾರಿಯು ಈಗಾಗಲೇ ಪ್ರಾರಂಭವಾಗಿದ್ದು, ಮಳೆ ಮುಗಿದ ತಕ್ಷಣ ಶಾಶ್ವತ ತಡೆಗೋಡೆ ನಿರ್ಮಿಸುವ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.