ಮಂಗಳೂರು: ಆಯುಷ್ಮಾನ್ ಭಾರತ್ ಯೋಜನೆಯನ್ನು ಬಳಸಲು ಫಲಾನುಭವಿಗಳು ಇದ್ದರೂ, ಮಾಹಿತಿಯ ಕೊರತೆಯಿಂದ ಈ ಯೋಜನೆ ಜನರನ್ನು ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ನಗರದ 24 ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳು, ಆರೋಗ್ಯಶ್ರೀ ಅಧಿಕಾರಿಗಳು, ದ.ಕ.ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ ಕರೆದು ಜಿಲ್ಲಾ ಪಂಚಾಯತ್ ಸದಸ್ಯರ ಮುಂದೆಯೇ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ದ.ಕ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಈ ಭರವಸೆ ನೀಡಿದರು.
ಹಿಂದೆ ವಾಜಪೇಯಿ ಆರೋಗ್ಯ ಕಾರ್ಡ್ ಇದ್ದಾಗ ನೇರವಾಗಿ ಬೇರೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಅವಕಾಶಗಳಿದ್ದವು. ಆದರೆ ಈಗ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಹೋದಾಗ ನೇರವಾಗಿ ಸವಲತ್ತುಗಳು ಇಲ್ಲವೆಂದು ಹೇಳುವುದಿಲ್ಲ. ಆದರೆ ಅಲ್ಲಿ ಸೌಜನ್ಯ ಹಾಗೂ ಸಂವೇದನಾಶೀಲದ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವಾಜಪೇಯಿ ಆರೋಗ್ಯ ಕಾರ್ಡ್ ನಂತೆ ಆಯುಷ್ಮಾನ್ ಭಾರತ್ ಗೆ ನಿರೀಕ್ಷಿಸಿದ ಮಟ್ಟಕ್ಕೆ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಅಲ್ಲದೆ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಅವರು ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಅವರು ಯಾವುದೇ ರೀತಿ ಫಲಾನುವಿಗಳಿಗೆ ಸಹಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಡಾ.ರಾಜೇಶ್ವರಿ ದೇವಿಯವರು ಸಮರ್ಥನೆ ನೀಡಲು ಪ್ರಯತ್ನಪಟ್ಟರು. ಆಗ ಸಚಿವರು ಕೊನೆಗೆ ಎಲ್ಲಾ ಅಧಿಕಾರಿಗಳ ಸಭೆಯನ್ನು ನಡೆಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ನಿರ್ಧರಿಸಿದರು.