ಬಂಟ್ವಾಳ: ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬೈಕ್ನಲ್ಲಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಕಬಕ ನಿವಾಸಿ ಎನ್ನಲಾದ ಮಹಮ್ಮದ್ ಆಸೀಫ್ (30) ಎಂಬಾತನನ್ನು ಬಂಧಿಸಿದ್ದಾರೆ. ಈತನನ್ನು ವಿಚಾರಿಸಿದಾಗ ಹ್ಯಾರೀಸ್ ಎಂಬಾತನ ಮನೆ ಬಳಿ ಗಾಂಜಾ ಇಟ್ಟಿರುವುದಾಗಿ ಆತ ತಿಳಿಸಿದ್ದಾನೆ. ಅದರಂತೆ ತಪಾಸಣೆ ನಡೆಸಿದಾಗ 450 ಗ್ರಾಂ ಗಾಂಜಾ ಪತ್ತೆಯಾಗಿದೆ. ಮತ್ತೋರ್ವ ಆರೋಪಿ ಹ್ಯಾರೀಸ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆಬೀಸಿದ್ದಾರೆ.
ಎಸ್.ಐ. ವಿನೋದ್ ರೆಡ್ಡಿ, ಸಿಬ್ಬಂದಿಯಾದ ಪ್ರಸನ್ನ ಕುಮಾರ್, ವಿನಾಯಕ, ಪ್ರತಾಪ್ ಅವರ ತಂಡವು ಕಾರ್ಯಾಚರಣೆ ನಡೆಸಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಗಾಂಜಾದಿಂದ ಎಣ್ಣೆ ತೆಗೆಯುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದರು.