ಮಂಗಳೂರು: ಕಳೆದ ವರ್ಷದ ನವೆಂಬರ್ನಲ್ಲಿ ಹೂವಿನ ಅಂಗಡಿಯೊಂದರಲ್ಲಿ 9 ಲಕ್ಷ ರೂ ಹಣ ಕದ್ದು ಪರಾರಿಯಾಗಿದ್ದ ಕಳ್ಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯ ಪಡಂಗಡಿ ಗ್ರಾಮದ ಹಮೀದ್ ಕುಂಞಮೋನು ಜಾಫರ್ (48) ಬಂಧಿತ ಆರೋಪಿ.
ಆರೋಪಿ ಹಮೀದ್ ಕುಂಞಮೋನು ಜಾಫರ್ ಕಳೆದ ನವೆಂಬರ್ನಲ್ಲಿ ನಗರದ ಕೆಎಸ್ ರಾವ್ ರಸ್ತೆಯ ಬಳಿಯ ಹೂವಿನ ಅಂಗಡಿಯಲ್ಲಿ ಕಳವು ಮಾಡಿ ಪರಾರಿಯಾಗಿದ್ದ. ಹೂವಿನ ಅಂಗಡಿಯಲ್ಲಿ 9 ಲಕ್ಷ ರೂ ಹಣವನ್ನು ಕಳವು ಮಾಡಿದ್ದ ಆರೋಪಿ ಹಮೀದ್, ಆ ಹಣದಲ್ಲಿ ಸ್ವಲ್ಪ ಬಳಸಿಕೊಂಡು ಉಳಿದ ಹಣವನ್ನು ನಗರದ ಪಾಳು ಬಿದ್ದ ಕಟ್ಟಡವೊಂದರ ಬಳಿ ನೆಲದಲ್ಲಿ ಹೂತಿಟ್ಟು ಬಳಿಕ ಪರಾರಿಯಾಗಿದ್ದ.
ಆರೋಪಿ ಹಣವನ್ನು ಹೂತಿಟ್ಟಿದ್ದ ಜಾಗದಲ್ಲಿ ಮತ್ತೆ ಬಂದು ನೋಡಿದಾಗ ಕಟ್ಟಡ ನೆಲಸಮವಾಗಿ ಹಣ ಹೂತಿಟ್ಟಿದ್ದ ಜಾಗದ ಮೇಲೆ ಬಿದ್ದಿತ್ತು. ಹಣ ಹೂತಿಟ್ಟ ಜಾಗದ ಮೇಲೆ ಕಟ್ಟಡ ನೆಲಸಮವಾದ ಕಾರಣ ಆರೋಪಿಗೆ ಹಣ ಸಿಕ್ಕಿರಲಿಲ್ಲ. ನಂತರ ಕಟ್ಟಡ ನೆಲಸಮ ಮಾಡುತ್ತಿರುವಾಗ ಜೆಸಿಬಿ ಚಾಲಕನಿಗೆ ದುಡ್ಡಿನ ಗಂಟು ಸಿಕ್ಕಿತ್ತು. ಹಣ ಸಿಕ್ಕ ವಿಚಾರವನ್ನು ಚಾಲಕ ಯಾರಿಗೂ ತಿಳಿಸದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದ.
ನವೆಂಬರ್ 16ರ ತಡರಾತ್ರಿ ಕೆಎಸ್ ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿನ ಹೂವು ವ್ಯಾಪಾರದ ಅಂಗಡಿಯಲ್ಲಿ ಕಳವಾಗಿತ್ತು. ಇದರ ಜೊತೆ ಸಿಸಿ ಕ್ಯಾಮರಾದ ಡಿವಿಆರ್ ಕೂಡಾ ಕಳವು ಮಾಡಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಮಂಗಳೂರು ಉತ್ತರ ಠಾಣೆ ಪೊಲೀಸರು ನಗರದ ಜ್ಯೋತಿ ಸರ್ಕಲ್ ಬಳಿ ಆರೋಪಿ ಹಮೀದ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣ ಹೂತಿಟ್ಟ ಬಗ್ಗೆ ತಿಳಿಸಿದ್ದಾನೆ. ಆ ಬಳಿಕ ಪೊಲೀಸರು ಜೆಸಿಬಿ ಆಪರೇಟರ್ನಿಂದ 5.80 ಲಕ್ಷ ರೂ ವಶ ಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 22ಕ್ಕೂ ಹೆಚ್ಚು ಪ್ರಕರಣಗಳ ದಾಖಲಾಗಿವೆ ಮತ್ತು ವಿವಿಧ ನ್ಯಾಯಾಲಯಗಳಲ್ಲಿ 22 ವಾರೆಂಟ್ ಜಾರಿಯಾಗಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಗಾಯಗೊಂಡಿದ್ದ ರಿಕ್ಷಾ ಚಾಲಕ ಗುಣಮುಖ
ಮಂಗಳೂರು ಗಾಂಜಾ ಪ್ರಕರಣ: ಜನವರಿ 11ರಂದು ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ವೈದ್ಯರು, ಮಹಿಳಾ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಬಂಧಿಸಿದ್ದರು. ಜ.7 ರಂದು ಬಿಡಿಎಸ್ ವಿದ್ಯಾರ್ಥಿ, ಯುಕೆಯ ವಿದ್ಯಾರ್ಥಿ ಇದ್ದ ಫ್ಲ್ಯಾಟ್ ಮೇಲೆ ದಾಳಿ ಮಾಡಿ ಆತನಿಂದ ಎರಡು ಕೆ.ಜಿ ಗಾಂಜಾ, ಆಟಿಕೆ ಪಿಸ್ತೂಲ್, ಎರಡು ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕ ಮಾಪನ ವಶಪಡಿಸಿಕೊಂಡಿದ್ದರು. ಆಗ ಆರೋಪಿಗಳನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದನ್ನು ಆಧಾರಿಸಿ ಪೊಲೀಸರು ದಾಳಿ ನಡೆಸಿದ್ದರು.
ಇದೇ ಗಾಂಜಾ ಪ್ರಕರಣದಲ್ಲಿ ವೈದ್ಯ ಸೇರಿದಂತೆ ಮತ್ತೆ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದೆ, ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 15 ತಲುಪಿದೆ. ವೈದ್ಯರು ಹಾಗೂ ವೈದ್ಯಕೀಯ ಕಾಲೇಜು ಗಾಂಜಾ ಪ್ರಕರಣದ ಬೆನ್ನತ್ತಿರುವ ಪೊಲೀಸರು ಓರ್ವ ವೈದ್ಯ ಹಾಗೂ ಓರ್ವ ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಯನ್ನು ಸೆರೆ ಹಿಡಿದಿದ್ದಾರೆ.