ಮಂಗಳೂರು: ಖಾಸಗಿ ರಸ್ತೆಯ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಆರೋಪಿ ವಿರುದ್ಧದ ಕೊಲೆ ಆರೋಪ ಸಾಬೀತಾಗಿದ್ದು, ಮಂಗಳೂರಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿತು. ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮದ ಗಾಂಧಿನಗರ ನಿವಾಸಿ ಯೋಗೀಶ್ ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣವೇನು?: ಯೋಗೀಶ್‌ಗೆ ಸೇರಿದ ಭೂಮಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣವಾದ ಮಣ್ಣಿನ ರಸ್ತೆಯನ್ನು ಉಮೇಶ್ ಹಾಗೂ ಅವರ ಕುಟುಂಬಸ್ಥರು ಬಳಸುತ್ತಿದ್ದರು. ಯೋಗೀಶ್ 2020ರ ಫೆಬ್ರವರಿ 9ರಂದು ಈ ರಸ್ತೆಯನ್ನು ಬಂದ್ ಮಾಡುವ ಉದ್ದೇಶದಿಂದ ತಡೆಯೊಡ್ಡುತ್ತಿದ್ದರು. ಇದನ್ನು ಗಮನಿಸಿದ ಉಮೇಶ್ ಹಾಗೂ ಅವರ ಕುಟುಂಬದವರು ಅಡೆತಡೆ ತೆಗೆಯಬೇಕೆಂದು ಕೇಳಿಕೊಂಡಿದ್ದರು. ಇದಕ್ಕೆ ಯೋಗೀಶ್ ಹಾಗೂ ಆತನ ಪುತ್ರ ಜೀವನ್ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಕಬ್ಬಿಣದ ಸರಳುಗಳನ್ನು ಹಿಡಿದುಕೊಂಡು ಬಂದು ಹಲ್ಲೆಗೆ ಮುಂದಾಗಿದ್ದರು. ಇದಕ್ಕೆ ಪ್ರತಿರೋಧ ಒಡ್ಡಿದಾಗ ಯೋಗೀಶ್ ಚೂರಿಯಿಂದ ಉಮೇಶ್ ಎದೆ ಹಾಗೂ ಭುಜಕ್ಕೆ ಚುಚ್ಚಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಸಾವನ್ನಪ್ಪಿದ್ದರು.
ಈ ಬಗ್ಗೆ ಯೋಗೀಶ್ ಹಾಗೂ ಜೀವನ್ ಅವರನ್ನು ಬೆಳ್ತಂಗಡಿ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಅಂದಿನ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಎರಡನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಪ್ರಕರಣದ ವಿಚಾರಣೆ ನಡೆಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಯೋಗೀಶ್‌ಗೆ ದಂಡಸಮೇತ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಎರಡನೇ ಆರೋಪಿ ಜೀವನ್ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಜ್ಯೋತಿ ಪ್ರಮೋದಾ ನಾಯಕ್ ವಾದಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಹಳೆ ವೈಷಮ್ಯಕ್ಕೆ ವ್ಯಕ್ತಿ ಕೊಲೆ; ಅಪರಾಧಿಗೆ ಜೀವಾವಧಿ ಶಿಕ್ಷೆ