ಮಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ಐಷಾರಾಮಿ ಕಾರನ್ನು ಪೊಲೀಸರೇ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಈ ಪ್ರಕರಣವನ್ನು ಸಿಐಡಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ವಂಚನೆ ಪ್ರಕರಣದ ಆರೋಪಿಗಳ ಜಾಗ್ವಾರ್ ಕಾರನ್ನು ಮಂಗಳೂರು ನಗರ ಪೊಲೀಸರು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬಳಿಕ ರಾಜ್ಯ ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ ಇತ್ತೀಚೆಗೆ ಮಂಗಳೂರು ಕಮಿಷನರ್ ಮಧ್ಯಂತರ ವರದಿಯನ್ನು ಎಡಿಜಿಪಿಗೆ ಸಲ್ಲಿಸಿದ್ದರು.
ಈ ವರದಿ ಸಲ್ಲಿಕೆಯ ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗಿದೆ. ಈ ಪ್ರಕರಣದ ತನಿಖೆ ನಡೆಸಲು ಶೀಘ್ರದಲ್ಲಿ ಸಿಐಡಿ ತಂಡ ರಚನೆಯಾಗುವ ಸಾಧ್ಯತೆ ಇದೆ.