ಮಂಗಳೂರು (ದ.ಕ): ಯಾವುದೇ ಮತದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳನ್ನು ಸೃಷ್ಟಿಸುವುದಾಗಲಿ, ಹಂಚಿಕೊಳ್ಳುವುದಾಗಲಿ, ಟೀಕೆ ಮಾಡುವುದಾಗಲಿ ಮಾಡಿದ್ದಲ್ಲಿ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದಿದ್ದಾರೆ. ಈ ನಡುವೆ ಮಾಡೆಲಿಂಗ್ ಕ್ಷೇತ್ರದಲ್ಲಿರುವ ಮಂಗಳೂರಿನ ಯುವತಿಯೋರ್ವಳು ಕೃಷ್ಣಾಷ್ಟಮಿಯಂದು ತನ್ನ ನಾಯಿಗೆ ಕೃಷ್ಣ ವೇಷ ಹಾಕಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾಳೆ.
ಅನ್ಯ ಧರ್ಮದ ಯುವತಿ ಕೃಷ್ಣನ ವೇಷವನ್ನು ನಾಯಿಗೆ ಹಾಕಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಕ್ಷಮೆಯಾಚಿಸಿ, ಫೋಟೋ ಡಿಲಿಟ್ ಮಾಡಿದ್ದಾಳೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ದೃಷ್ಟಿಯಿಂದ ಮಂಗಳೂರು ನಗರಕ್ಕೆ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಆಗಮಿಸಿದ್ದು, ನಗರದ ಬೀದಿಯಲ್ಲಿ ಪಥ ಸಂಚಲನ ನಡೆಸಿದೆ.