ನೂಜಿಬಾಳ್ತಿಲ/ಮಂಗಳೂರು : ಸರ್ಕಾರಿ ಉದ್ಯೋಗಕ್ಕಾಗಿ ಅಲೆಯದೆ ಸ್ವಯಂ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಲು ಹೊರಟು ಜೇನು ಸಾಕಾಣಿಕೆ ಮಾಡುತ್ತಿದ್ದ ರೈತನಿಗೆ ಸದ್ಯ 45 ವರ್ಷದ ಜೇನು ಕೃಷಿ ಅಂತ್ಯವಾಗುವ ಆತಂಕ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ನಿವಾಸಿ ಎಲ್. ಕುಮಾರ್, ಜೇನು ಕೃಷಿಯಲ್ಲಿ 45 ವರ್ಷಗಳ ಪರಿಣತಿ ಪಡೆದು, ಮೂರು ಸಾವಿರ ಜೇನು ಪೆಟ್ಟಿಗೆ ಕೃಷಿ ಮಾಡಿಕೊಂಡು ಬಂದಿದ್ದಾರೆ. ತಮಿಳುನಾಡಿದ ಕನ್ಯಾಕುಮಾರಿ ಮಾರ್ಥಂಡ ಎಂಬಲ್ಲಿ ಜೇನು ಕೃಷಿ ಕಲಿತು, ಸ್ವಂತವಾಗಿ ಜೇನು ಸಾಕಾಣಿಕೆ ಉದ್ಯಮ ಆರಂಭಿಸಿದರು. ಸದ್ಯ ಸುಮಾರು 800 ಪೆಟ್ಟಿಗೆಯಲ್ಲಿ ಜೇನು ಕೃಷಿ ಮಾಡುತ್ತಿದ್ದು, ಇವರಿಗೆ ತಾಯಿ ಭವಾನಿ ಹಾಗು ಪತ್ನಿ ರೇಖಾ ಕೈಜೋಡಿಸಿದ್ದಾರೆ.
ಜೇನು ಕೃಷಿ ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಪರಿಣಿತಿ ಪಡೆದಿರಬೇಕು. ಉತ್ತಮ ಪರಿಸರ, ಹೂ ಬಿಡುವ ಸ್ಥಳ, ಸಸ್ಯ ಸಂಪತ್ತು, ಮಾಲಿನ್ಯ ರಹಿತ ಗಾಳಿ, ನೀರು, ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಹಾಗೂ ನೆರಳಿನ ಪ್ರದೇಶ ಹೀಗೆ ಹಲವಾರು ಕಟ್ಟು ನಿಟ್ಟಿನ ಕ್ರಮ ಬಳಸಿ ಕಷ್ಟಪಟ್ಟು ಕೃಷಿ ಮಾಡಬೇಕು. ನಿಸರ್ಗದಲ್ಲಿ ಪರಾಗ ಮತ್ತು ಮಕರಂದದ ಪ್ರಮಾಣ ಕಡಿಮೆಯಾದರೆ ಸಕ್ಕರೆ ಪಾಕ ಒದಗಿಸಬೇಕು.
ಆದರೆ ಇದೀಗ ಹೀಗೆ ಒದಗಿಸುವ ಸಕ್ಕರೆ ಪಾಕದಲ್ಲಿ ದಿನಕ್ಕೆ ಸಾವಿರಾರು ಜೇನು ಬಿದ್ದು ಸಾಯುತ್ತಿದ್ದು, ಕುಮಾರ್ ಸೇರಿದಂತೆ ಹಲವು ಜೇನುಕೃಷಿಕರು ಆತಂಕಕ್ಕೀಡಾಗಿದ್ದಾರೆ. ಯಾಕೆ ಹೀಗಾಗುತ್ತಿದೆ ಎಂಬುದರ ಬಗ್ಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ.
ಸಕ್ಕರೆ ಪಾಕದಲ್ಲಿ ಬಿದ್ದು ದಿನವೊಂದಕ್ಕೆ ಸಾವಿರಾರು ಜೇನುನೊಣಗಳು ಸಾವನ್ನಪ್ಪುತ್ತಿವೆ. ಇದಕ್ಕೆ ಸಕ್ಕರೆ ಕಲಬೆರಕೆ ಅಥವಾ ಬೇರೆ ಯಾವುದಾದರೂ ಕಾರಣ ಇದೆಯಾ ಎಂಬುದು ತಿಳಿಯುತ್ತಿಲ್ಲ. ಸಂಬಂಧಪಟ್ಟವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ನನ್ನಂತಹ ಹಲವು ಜೇನು ಕೃಷಿಕರನ್ನು ಕಾಪಾಡಬೇಕಿದೆ ಎಂದು ಕೃಷಿಕ ರಮೇಶ್ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಜೀವನ ನಿರ್ವಹಣೆಗೆ ತಮ್ಮದೆಯಾದ ದಾರಿ ಕಂಡುಕೊಳ್ಳುತ್ತಿರುವ ಕುಮಾರ್ ಅವರಿಗೆ ಸದ್ಯ ಸಹಾಯದ ಅವಶ್ಯಕತೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಕೃಷಿ ಪರಿಣಿತರು ಈ ಕುರಿತು ಗಮನಹರಿಸಬೇಕಿದೆ.