ಮಂಗಳೂರು: ಪಣಂಬೂರು ಬೀಚ್ಗೆ ಹೋಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಡಿ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಅಳಪೆ ಮಠದ ಹತ್ತಿರದ ನಿವಾಸಿ ದೀಕ್ಷಿತ್ ಯಾನೆ ದೀಕ್ಷಿತ್ ಅಳಪೆ (32) ಮತ್ತು ಅಳಪೆ ಬಜಾಲ್ನ ಲಾಯ್ಡ್ ಪಿಂಟೋ (32) ಬಂಧಿತರು.
ಜು.ಲೈ 21 ರಂದು ಮಂಗಳೂರಿನಲ್ಲಿ ಬ್ಯಾಚುಲರ್ ಆಫ್ ಹಾಸ್ಪಿಟಲ್ ಅಡ್ಮಿಸ್ಟ್ರೇಷನ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಪಣಂಬೂರು ಬೀಚ್ಗೆ ಹೋಗಿ ವಾಪಸ್ ಬರುವಾಗ ಅವರನ್ನು ಆರೋಪಿಗಳು ಹಿಂಬಾಲಿಸಿಕೊಂಡು ಬಂದಿದ್ದರು. ಬಿಜೈ ಕಾಪಿಕಾಡ್ನ 7ನೇ ಕ್ರಾಸ್ನಲ್ಲಿ ವಿದ್ಯಾರ್ಥಿಗಳನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಪಣಂಬೂರು ಬೀಚ್ಗೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಯುವಕರ ಗುಂಪೊಂದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪ ಪ್ರಕರಣ ನಿನ್ನೆ ನಡೆದಿತ್ತು. ಮಂಗಳೂರಿನ ಮೆಡಿಕಲ್ ಕಾಲೇಜೊಂದರ 6 ವಿದ್ಯಾರ್ಥಿಗಳು ಶುಕ್ರವಾರ ಸಂಜೆ 5.30ರ ಸುಮಾರಿಗೆ ಪಣಂಬೂರು ಬೀಚ್ಗೆ ಹೋಗಿದ್ದಾರೆ. ಯುವಕರು ಬೈಕ್ನಲ್ಲಿ ಬಂದಿದ್ದರೆ, ಯುವತಿಯರು ಬಸ್ನಲ್ಲಿ ತೆರಳಿದ್ದರು. ಇವರು ಬೀಚ್ನಲ್ಲಿದ್ದ ವೇಳೆ ಇಬ್ಬರು ಅಪರಿಚಿತರು ಇವರ ಚಲನವಲನಗಳನ್ನು ಗಮನಿಸುತ್ತ, ಮೊಬೈಲ್ ಫೋನ್ಗಳಲ್ಲಿ ವಿಡಿಯೋ ಮಾಡಿದ್ದರು.
ವಿದ್ಯಾರ್ಥಿಗಳು ಇದನ್ನು ಗಮನಿಸಿದರೂ ಅದನ್ನು ಪ್ರಶ್ನಿಸದೇ ತಮ್ಮ ಪಾಡಿಗೆ ತಾವು ಇದ್ದರು. ನಂತರ ಯುವಕರು ಬೈಕ್ನಲ್ಲಿ, ಯುವತಿಯರು ಬಸ್ನಲ್ಲಿ ಹಿಂದಿರುಗಿದ್ದರು. ನಾಲ್ವರು ವಿದ್ಯಾರ್ಥಿನಿಯರ ಪೈಕಿ ಒಬ್ಬ ಯುವತಿ ನಗರದ ಚಿಲಿಂಬಿಯಲ್ಲಿ ಬಸ್ನಿಂದ ಇಳಿದು ತನ್ನ ಪಿಜಿ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಣಂಬೂರು ಬೀಚ್ನಲ್ಲಿ ಹಿಂಬಾಲಿಸುತ್ತಿದ್ದ ಅದೇ ಅಪರಿಚಿತರು ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಯುವತಿಗೆ ಬೆದರಿಸಿದ್ದರು. ಅಲ್ಲದೇ 'ಕೇರಳ ಸ್ಟೋರಿ' ನೋಡಿಯೂ ನಿಮಗೆ ಬುದ್ಧಿ ಬರುವುದಿಲ್ವಾ ಎಂದು ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಸಂಬಂಧ ವಿದ್ಯಾರ್ಥಿನಿಯರು ಉರ್ವ ಸ್ಟೋರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: Moral policing: ಮಂಗಳೂರಲ್ಲಿ ಬೀಚ್ಗೆ ಹೋಗಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ನೈತಿಕ ಪೊಲೀಸ್ ಗಿರಿ ಆರೋಪ.. ದೂರು ದಾಖಲು
ಮಂಗಳೂರಿನ ಮೂವರಿಗೆ ಗಡಿಪಾರು ನೋಟಿಸ್: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿತ್ತು. ನಗರದಲ್ಲಿ ನಡೆದ ಎರಡು ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿತ್ತು. ಬಾಲು ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಎಂಬ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿತ್ತು.
ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ಪ್ರಕರಣ: ಮಂಗಳೂರಿನ ಮೂವರಿಗೆ ಗಡಿಪಾರು ನೋಟಿಸ್