ಮಂಗಳೂರು: ಸಾಮಾಜಿಕ ಜಾಲತಾಣಗಳನ್ನು ಈ ನೆಲದ ಕಾನೂನಿನ ಚೌಕಟ್ಟಿನಡಿಗೆ ತಂದು ಸಾಂಪ್ರದಾಯಿಕ ಪತ್ರಿಕೋದ್ಯಮಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ. ಕೇಂದ್ರ ಸರಕಾರ ಇದಕ್ಕೆ ಕರಡು ಪ್ರತಿಯೊಂದನ್ನು ಸಿದ್ಧಪಡಿಸಿರುವುದು ಉತ್ತಮ ಬೆಳವಣಿಗೆ ಎಂದು ಹಿರಿಯ ಪತ್ರಕರ್ತೆ ಬರ್ಖಾದತ್ ಅಭಿಪ್ರಾಯಪಟ್ಟರು.
ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆಯುತ್ತಿರುವ ಲಿಟ್ ಫೆಸ್ಟ್ನ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮನ ಬಂದಂತೆ ಪೋಸ್ಟ್, ಕಮೆಂಟ್ಗಳನ್ನು ಮಾಡಲಾಗುತ್ತಿದೆ. ಅದನ್ನು ಈ ನೆಲದ ಕಾನೂನಿನ ಚೌಕಟ್ಟಿನಡಿಯಲ್ಲಿ ತರುವ ಅವಶ್ಯಕತೆ ಇದೆ ಎಂದು ಹೇಳಿದರು.
ಮಾಧ್ಯಮಗಳು ಯಾವುದೇ ಚಿಂತನೆಗಳ ಪರ ವಾಲುತ್ತಿದೆ, ಏಕಮುಖವಾಗಿ ವರದಿ ಮಾಡುತ್ತಿದೆ ಎಂಬುದು ಸುಳ್ಳು ಎಂದು ಹೇಳಿದ ಬರ್ಖಾದತ್ ಅವರ ವಾದವನ್ನು ಖಂಡಿಸಿದ ಪತ್ರಕರ್ತೆ ಸ್ಮಿತಾ ಪ್ರಕಾಶ್ ಮಾತನಾಡಿ, ಮಾಧ್ಯಮಗಳಲ್ಲಿ ಒಂದು ಚಿಂತನೆಯತ್ತ ವಾಲುವುದು ಅನಿವಾರ್ಯ. ಯಾವುದೇ ಪತ್ರಕರ್ತನು ತಮ್ಮ ಪತ್ರಿಕೆಯ ಅಥವಾ ಟಿ.ವಿ.ಮಾಧ್ಯಮದ, ಮಾಲೀಕನು ಯಾವ ಅಜೆಂಡಾವನ್ನು ಹೊಂದಿದ್ದಾನೋ ಅದನ್ನೇ ಅನುಸರಿಸಬೇಕಾಗುತ್ತದೆ. ಅಲ್ಲದೆ ಕೆಲವೊಂದು ಬಾರಿ ಯಾವುದೇ ಮಾಧ್ಯಮಗಳು ಯಾವುದೇ ಇಸಂ ಇಟ್ಟುಕೊಳ್ಳದಿದ್ದರೂ, ಅದರ ಪತ್ರಕರ್ತ ಒಂದು ಇಸಂ ಇಟ್ಟುಕೊಂಡಿರುತ್ತಾನೆ ಎಂದು ಹೇಳಿದರು.
ಹಿಂದೆ ದೂರದರ್ಶನ ಒಂದು ಮಾತ್ರ ಇದ್ದ ಕಾಲದಲ್ಲಿ ಯಾವುದೇ ರೀತಿಯ ಸ್ಪರ್ಧೆ ಇರಲಿಲ್ಲ. ಆದರೆ ಇಂದು ಟಿ.ವಿ ಕ್ಷೇತ್ರದಲ್ಲಿ ಬಹಳಷ್ಟು ಮಾಧ್ಯಮಗಳು ಇರುವುದರಿಂದ ಟಿಆರ್ಪಿಗಾಗಿ ಪೈಪೋಟಿ ನಡೆಸಲಾಗುತ್ತದೆ ಎಂದು ಸ್ಮಿತಾ ಪ್ರಕಾಶ್ ಹೇಳಿದರು.