ಮಂಗಳೂರು: ನಗರದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ನಿರೀಕ್ಷೆಯ ಮಟ್ಟಕ್ಕೆ ಇನ್ನೂ ಬೆಳೆದಿಲ್ಲ. ಮಂಗಳೂರು ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು. ಆರೋಗ್ಯದ ದೃಷ್ಟಿಯಿಂದ ಪ್ರಾಮುಖ್ಯತೆಯಿದೆ. ಶಿಕ್ಷಣ ವ್ಯವಸ್ಥೆಯೂ ಉತ್ತಮವಾಗಿದೆ. ಆದರೆ ಪ್ರಸ್ತುತ ಅದನ್ನು ಉದ್ಯಮವಾಗಿ, ವೃತ್ತಿಯಾಗಿ ಪರಿವರ್ತಿಸುವಲ್ಲಿ ಸರ್ಕಾರ ಸೋತಿದೆ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ಹೇಳಿದರು.
ಹಿನ್ನೀರು ಮುಖಾಂತರ ಪ್ರವಾಸೋದ್ಯಮ ಅಭಿವೃದ್ಧಿ, ರೆಸಾರ್ಟ್, ಇಕೋ ಟೂರಿಸಂ ಮುಖಾಂತರ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗುತ್ತಿದೆ. ಜೊತೆಗೆ ಟೆಂಪಲ್ ಟೂರಿಸಂ, ಹೆಲಿ ಟೂರಿಸಂ ಅಭಿವೃದ್ಧಿಗೂ ಸಾಕಷ್ಟು ಚಿಂತನೆ ನಡೆಸಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಿಂದ ಕ್ರೂಸ್ ಮುಖಾಂತರ ಬರುವ ವಿದೇಶಿ ಪ್ರವಾಸಿಗರಿಗೆ ಬೇಕಾಗುವ ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲ. ಆದ್ದರಿಂದ ಹೆಚ್ಚಿನ ಪ್ರವಾಸಿಗರು ಕ್ರೂಸ್ನಿಂದ ಆಚೆಗೆ ಬರುವುದಿಲ್ಲ. ಪಿಲಿಕುಳದಂತಹ ಜೈವಿಕ ಉದ್ಯಾನವನಕ್ಕೆ ಪ್ರವಾಸಿಗರು ಭೇಟಿ ನೀಡುತ್ತಿಲ್ಲ ಎಂದರು.
ಕೇಂದ್ರದ ಸಾಗರಮಾಲಾ ಯೋಜನೆಗೆ ಸೀ ಪ್ಲೇಯರ್ಅನ್ನು ಜೋಡಣೆ ಮಾಡಿಕೊಂಡಲ್ಲಿ ಎಲ್ಲಾ ನದಿಗಳಲ್ಲಿಯೂ ಹಿನ್ನೀರು ಪ್ರದೇಶಗಳನ್ನು ನಿರ್ಮಿಸಬಹುದು. ಈ ಮೂಲಕ 320 ಕಿ.ಮೀ. ವ್ಯಾಪ್ತಿಯ ಕೋಸ್ಟಲ್ ಬೆಲ್ಟ್ ದೊಡ್ಡ ಹಬ್ ಆಗಲಿದೆ. ಇದಕ್ಕಾಗಿ ಯೋಜನೆ ಕೈಗೊಂಡಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುತ್ತದೆ.
ಕರಾವಳಿಯಲ್ಲಿ ಅಂತಾರಾಷ್ಟ್ರೀಯ ಮಾದರಿಯಲ್ಲಿ ಸ್ಪೀಡ್ ಬೋಟ್ಗಳನ್ನು ಅಳವಡಿಸಿಕೊಳ್ಳಬೇಕೆಂದರೆ, ಅವುಗಳ ನಿಲುಗಡೆ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಅದಕ್ಕಾಗಿ ಸರ್ಕಾರ ನಿಲುಗಡೆ ಪ್ರದೇಶ ನಿರ್ಮಿಸಲು ಯೋಜನೆ ರೂಪಿಸಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.