ಮಂಗಳೂರು: ಕಳೆದ 10 ವರ್ಷಗಳಿಂದ ದ.ಕ. ಜಿಲ್ಲೆಯ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ವೈಫಲ್ಯಗಳ ಸರದಾರರಾಗಿದ್ದಾರೆ. ಮಂಗಳೂರು ಅಭಿವೃದ್ಧಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಯುವ ಅಭ್ಯರ್ಥಿ ಮಿಥುನ್ ರೈಯವರನ್ನು ಕಣಕ್ಕಿಳಿಸಿವೆ. ಖಂಡಿತವಾಗಿಯೂ ಜನರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂಬುದು ಬಿಜೆಪಿಯವರಿಗೂ ತಿಳಿದಿದ್ದು, ಅವರಲ್ಲಿ ಭಯ ಹುಟ್ಟಿಸಿದೆ ಎಂದು ಕಾಂಗ್ರೆಸ್ ದ.ಕ.ಜಿಲ್ಲಾ ಮಾಧ್ಯಮ ವಕ್ತಾರ ಎ.ಸಿ.ವಿನಯರಾಜ್ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ನಗರ ಅಭಿವೃದ್ಧಿಯಾಗಲು ಮೂಲ ಕೊಂಡಿ ರಸ್ತೆಗಳು. ಆದರೆ ಸಂಸದರ ವೈಫಲ್ಯದಿಂದ ಬಂಟ್ವಾಳ-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ಕುಂಠಿತಗೊಂಡಿದೆ. ಅಲ್ಲದೆ ತಲಪಾಡಿ-ಮಂಗಳೂರು-ಸುರತ್ಕಲ್-ಗೋವಾ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದೆಲ್ಲದರಿಂದ ಮಂಗಳೂರು ನಗರದ ಬೆಳವಣಿಗೆಗೆ ಹೊಡೆತ ಬಿದ್ದಿದೆ.
ಸುರತ್ಕಲ್ ಟೋಲ್ ಗೇಟ್ ಮುಚ್ಚುತ್ತೇವೆ ಎಂದಿದ್ದರು. ಮತ್ತೊಂದು ಸಲ ಹೆಜಮಾಡಿ ಟೋಲ್ ಗೇಟ್ನೊಂದಿಗೆ ಅದನ್ನು ವಿಲೀನಗೊಳಿಸುತ್ತೇವೆ ಎಂದಿದ್ದರು. ಆದರೆ ಇಂದಿಗೂ ಅಲ್ಲಿ ಟೋಲ್ ಪಡೆಯಲಾಗುತ್ತಿದೆ. ಇದು ಸಂಸದರು ಸುಳ್ಳುಗಾರರು, ಅವರ ಮಾತಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತಿದೆ ಎಂದರು.
ಅಲ್ಲದೆ ಪಂಪ್ ವೆಲ್ ಮತ್ತು ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿ ಸುಮಾರು 8 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದು ಪೂರ್ಣಗೊಳ್ಳದ್ದಕ್ಕೆ ಹಿಂದಿನ ಶಾಸಕರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಆದರೆ ಈ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳ್ಳದಿರಲು ಸಂಸದ ನಳಿನ್ ಕುಮಾರ್ ಅವರೇ ನೇರ ಹೊಣೆ ಎಂದು ವಿನಯರಾಜ್ ಆರೋಪಿಸಿದರು.
ನಳಿನ್ ಕುಮಾರ್ ಅವರು ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದರ ಮೂಲಕ ಮತ ಪಡೆಯುತ್ತಿದ್ದಾರೆಯೇ ಹೊರತು ಅಭಿವೃದ್ಧಿ ಕಾರ್ಯದಿಂದಲ್ಲ. ಆದ್ದರಿಂದ ದ.ಕ. ಜಿಲ್ಲೆಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದು, ಈ ಸಲ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದು ಎ.ಸಿ.ವಿನಯರಾಜ್ ಹೇಳಿದರು.