ಮಂಗಳೂರು: ನಗರದ ಕಾರ್ ಸ್ಟ್ರೀಟ್ ನ ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಬಂದರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ಹಾಗೂ ಸೆನ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಪ್ರಕರಣದ ಬಗ್ಗೆ ಶೀಘ್ರವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಮಾರ್ಚ್ 4ರಂದು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಬಗ್ಗೆ ನಾವು ಕಾನೂನು ತಜ್ಞರ ಅಭಿಪ್ರಾಯ ಪಡೆದು ಐಪಿಸಿ ಸೆಕ್ಷನ್ 324 ಹಾಗೂ 504ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾರಂಭಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿರುವ ಬಳಿಕದ ಕ್ಷಣ ಕ್ಷಣದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲನೆ ನಡೆಸಿ, ಪ್ರಾಧ್ಯಾಪಕರ ವೃಂದ, ಪ್ರಾಂಶುಪಾಲರ ಹೇಳಿಕೆ, ಇತರ ಸಾಕ್ಷಿಗಳನ್ನು ತನಿಖೆಗೆ ಸಹಕರಿಸುವಂತೆ ನೋಟಿಸ್ ನೀಡಿ ತನಿಖೆ ನಡೆಸಲಾಗುತ್ತಿದೆ ಎಂದರು.
ಇದೇ ವಿಚಾರವಾಗಿ ದೂರು ನೀಡಿರುವ ವಿದ್ಯಾರ್ಥಿನಿ ವಿರುದ್ಧ ಮತ್ತೋರ್ವ ವಿದ್ಯಾರ್ಥಿನಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಿಜಾಬ್ ವಿವಾದದ ಬಗ್ಗೆ ದೂರು ನೀಡಿರುವ ವಿದ್ಯಾರ್ಥಿನಿ ಓರ್ವ ವಿದ್ಯಾರ್ಥಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಜೊತೆಗೆ ಆ ವಿದ್ಯಾರ್ಥಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ದೂರುಗಳ ಬಗ್ಗೆ ಪ್ರಕರಣಗಳ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು.
ಹಿಜಾಬ್ ವಿವಾದದ ಬಗ್ಗೆ ಗೊಂದಲ ಸೃಷ್ಟಿಯಾದ ತಕ್ಷಣ ತಾನು ಸ್ಥಳಕ್ಕೆ ಭೇಟಿ ನೀಡಿದ್ದು, ದೂರು ನೀಡಿರುವ ವಿದ್ಯಾರ್ಥಿನಿ ಹಾಗೂ ಪ್ರಾಂಶುಪಾಲರಲ್ಲಿ ಖುದ್ದು ಮಾತನಾಡಿದ್ದೇನೆ. ಕಾನೂನಿನ ಮೂಲಕ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬಗ್ಗೆ ವಿವೇಚನಾ ರಹಿತ ಪೋಸ್ಟ್ ಗಳಿಗೆ ತಾನು ಉತ್ತರ ನೀಡುವುದಿಲ್ಲ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಓದಿ : 80,039 ಸರ್ಕಾರಿ ಹುದ್ದೆಗಳಿಗೆ ಅಧಿವೇಶನದಲ್ಲೇ ಅಧಿಸೂಚನೆ ಹೊರಡಿಸಿದ ಸಿಎಂ ಕೆಸಿಆರ್