ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಕಿಕೊಟ್ಟಂತಹ ಮಾರ್ಗಸೂಚಿಯಿಂದ ಇಂದು ಬಹುಕಾಲ ಭಾರತವನ್ನು ವಿಶ್ವದೆತ್ತರಕ್ಕೆ ಬೆಳೆಸುವಂತಹ ಮಟ್ಟದಲ್ಲಿ ನಾವಿದ್ದೇವೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ದ.ಕ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಪುರಭವನದ ಮುಂಭಾಗವಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮಾತನಾಡಿದ ಅವರು, ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ಣಪ್ರಮಾಣದ ಶಾಂತಿ ಹಾಗೂ ಸೌಹಾರ್ದತೆಯನ್ನು ಮುಂದಿಟ್ಟುಕೊಂಡು ಚಳುವಳಿ ಸ್ವರೂಪ ನೀಡಿದ್ದರು ಎಂದರು.
ಇಂದಿನ ಕಾಲಘಟ್ಟದಲ್ಲಿ ಗಾಂಧೀಜಿಯವರು ನಮಗೆ ಮತ್ತೆ ಮತ್ತೆ ಹೇಗೆ ಅನಿವಾರ್ಯ ಆಗುತ್ತಾರೆಂದರೆ ರಾಷ್ಟ್ರಪ್ರೇಮಕ್ಕೆ ಒತ್ತು ಕೊಟ್ಟು ಇಡೀ ಭಾರತವನ್ನು ಒಗ್ಗೂಡಿಸಿ ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸುವುದಕ್ಕೆ ಕೇವಲ ಸಂಘಟನೆ, ಶಾಂತಿ, ಅಹಿಂಸೆ, ಪ್ರೀತಿಯನ್ನು ಅಸ್ತ್ರವಾಗಿ ಬಳಸಿದರು. ಅವರು ಹಾಕಿಕೊಟ್ಟಂತಹ ಮಾರ್ಗಸೂಚಿಯಿಂದ ಇಂದು ಬಹುಕಾಲ ಭಾರತವನ್ನು ವಿಶ್ವದೆತ್ತರಕ್ಕೆ ಬೆಳೆಸುವಂತಹ ಮಟ್ಟದಲ್ಲಿ ನಾವಿದ್ದೇವೆ. ಅವರ ಸ್ವಚ್ಛ ಭಾರತದ ಕಲ್ಪನೆಯನ್ನು ಇಡೀ ರಾಜ್ಯದಲ್ಲಿಯೇ ಸಾಕಾರಗೊಳಿಸಿರುವ ಜಿಲ್ಲೆಯೆಂದರೆ ಅದು ದಕ್ಷಿಣ ಕನ್ನಡ ಜಿಲ್ಲೆ ಎಂದು ತಿಳಿಸಿದರು.