ಮಂಗಳೂರು: ನವರಾತ್ರಿ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಎತ್ತ ಕಣ್ಣಾಯಿಸಿದರೂ ಬೆಳಕಿನ ಚಿತ್ತಾರವೇ ಕಾಣುತ್ತಿದೆ. ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಗರದ ಸುಮಾರು 7 ಕಿ.ಮೀ ಉದ್ದಕ್ಕೂ 30 ಲಕ್ಷ ವಿದ್ಯುತ್ ದೀಪಗಳು ಪ್ರಕಾಶಮಾನವಾಗಿ ಬೆಳಗುತ್ತಿವೆ. ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ಮಂಗಳೂರು ದಸರಾ ಇಷ್ಟರ ಮಟ್ಟಿಗೆ ಖ್ಯಾತಿ ಗಳಿಸಲು ದೀಪಗಳ ಸಿಂಗಾರವೇ ಪ್ರಮುಖ ಕಾರಣ. ಇಲ್ಲಿನ ವಿದ್ಯುತ್ ದೀಪಗಳ ವರ್ಣಮಯ ಶೃಂಗಾರ ಮಂಗಳೂರು ದಸರಾದ ಕಳೆ ಹೆಚ್ಚಿಸಿದೆ.
ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಸಂಜೆಯಾಗುತ್ತಿದ್ದಂತೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಕುದ್ರೋಳಿ ಕ್ಷೇತ್ರ ಸೇರಿದಂತೆ ದಸರಾ ಮೆರವಣಿಗೆ ಹಾದುಹೋಗುವ ನಗರದ ಸುಮಾರು 7 ಕಿ.ಮೀ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ಬಾರಿಯ ದಸರಾಕ್ಕಾಗಿ 14 ಲಕ್ಷ ದೊಡ್ಡ ಪ್ರಮಾಣದ ಬಲ್ಬ್‌ಗಳು ಸೇರಿದಂತೆ ಒಟ್ಟು 30 ಲಕ್ಷ ಬಲ್ಬ್‌ಗಳಿಂದ ಶೃಂಗಾರ ಮಾಡಲಾಗಿದೆ. ಈ ಬಾರಿ ಕಳೆದ ಬಾರಿಗಿಂತ ಐದು ಲಕ್ಷ ಬಲ್ಬ್‌ಗಳನ್ನು ಹೆಚ್ಚುವರಿಯಾಗಿ ಬಳಸಿರುವುದು ವಿಶೇಷ.
ದಸರಾ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ದಿನದಿಂದ 9 ದಿನಗಳ ಕಾಲ ಸಂಜೆ 6 ಗಂಟೆಯಾಗುತ್ತಿದ್ದಂತೆ ವಿದ್ಯುತ್ ದೀಪಗಳನ್ನು ಉರಿಸಲಾಗುತ್ತದೆ. ನಗರದ ಪ್ರಮುಖ ಪ್ರದೇಶಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಸದಾ ಜನಜಂಗುಳಿ ವಾಹನಗಳಿಂದ ತುಂಬಿರುವ ನಗರದ ರಸ್ತೆಗಳೆಲ್ಲಾ ಬೆಳಕಿನ ಚಿತ್ತಾರದಿಂದ ಕಣ್ಮನ ಸೆಳೆಯುತ್ತಿವೆ.
ದೇಶದ ಬೇರೆ ಕಡೆ ಇಷ್ಟು ಪ್ರಮಾಣದಲ್ಲಿ ಬೆಳಕಿನ ಸಂಯೋಜನೆ ಕಾಣಸಿಗಲಾರದು. ಇಷ್ಟೊಂದು ಪ್ರಮಾಣದ ಬೆಳಕಿನ ಚಿತ್ತಾರಕ್ಕಾಗಿ ಈ ಮೊದಲು ಕುದ್ರೋಳಿ ಕ್ಷೇತ್ರ ದಿಂದಲೇ ಖರ್ಚು ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆ ವಿದ್ಯುತ್ ದೀಪಾಲಂಕಾರದ ಖರ್ಚನ್ನು ಭರಿಸುತ್ತಿದೆ. ಈ ದೀಪಾಲಂಕಾರಕ್ಕಾಗಿ ಸುಮಾರು 30 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ದಸರಾ ವೇಳೆ ದೇಶ- ವಿದೇಶದ ಅಸಂಖ್ಯಾತ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೀಪಾಲಂಕಾರ ಕಂಡು ಖುಷಿ ಪಡುತ್ತಾರೆ.
ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು ದಸರಾ ನಡೆಯುತ್ತಿದೆ. ದಸರಾ ವರ್ಷದಿಂದ ವರ್ಷಕ್ಕೆ ಹಲವು ವಿಶೇಷತೆಗಳಿಂದ ಜನರ ಗಮನ ಸೆಳೆಯುತ್ತಿದೆ. ಈ ಬೆಳಕಿನ ಸಂಯೋಜನೆಯೊಂದಿಗೆ ಇದೇ ತಿಂಗಳ ಅಕ್ಟೋಬರ್ 24ನೇ ತಾರೀಕಿನಂದು ಅದ್ಧೂರಿ ಮಂಗಳೂರು ದಸರಾ ಮೆರವಣಿಗೆಯು ನಗರದಾದ್ಯಂತ ನಡೆಯಲಿದೆ.
ಇದನ್ನೂ ಓದಿ: ಆಕರ್ಷಕ ದೀಪಾಲಂಕಾರದಿಂದ ಮೈಸೂರು ನಗರ ಝಗಮಗ-ವಿಡಿಯೋ