ಮಂಗಳೂರು: ನಗರದ ಗರೋಡಿಯಲ್ಲಿ ನಡೆದ ಆಟೋರಿಕ್ಷಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಗುರುತು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಗುರುತಿಸಲು ಶಾರೀಕ್ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ್ದಾರೆ.
ನವೆಂಬರ್ 19 ರಂದು ಗರೋಡಿ ಸಮೀಪದ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಚಾಲಕ ಪುರುಷೋತ್ತಮ್ ಮತ್ತು ಆರೋಪಿ ಗಾಯಗೊಂಡಿದ್ದರು. ಇಬ್ಬರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ, ಆರೋಪಿಯ ಮುಖ ವಿರೂಪಗೊಂಡಿದ್ದು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಶಾರೀಕ್ ಎಂಬಾತನ ಕುಟುಂಬವನ್ನು ಮಂಗಳೂರಿಗೆ ಕರೆತರಲಾಗಿದೆ. ಇದೀಗ ಆತನ ಸಹೋದರಿ, ಚಿಕ್ಕಮ್ಮ ಮತ್ತು ಕುಟುಂಬದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಗುರುತು ಪತ್ತೆ ಹಚ್ಚಲಿದ್ದಾರೆ.
ಇದನ್ನೂ ಓದಿ: ಪತ್ತೆಯಾಗದ ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಗುರುತು.. ಇಬ್ಬರು ವಶಕ್ಕೆ: ಎಡಿಜಿಪಿ ಅಲೋಕ್ಕುಮಾರ್
ಶಾರೀಕ್ ಯಾರು?: ಶಾರೀಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. 2019ರ ಸೆಪ್ಟೆಂಬರ್ನಲ್ಲಿ ಕದ್ರಿ ಪೊಲೀಸ್ ಠಾಣೆ ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಉಗ್ರರ ಪರ ಗೋಡೆಬರಹ ಬರೆದ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿದ್ದು, ಇದರಲ್ಲಿ ಮಾಝ್ ಎಂಬಾತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಗೆ ಸಹಕಾರ ನೀಡಿದ ಸಾದಾತ್ ಎಂಬಾತನನ್ನು ಈ ಹಿಂದೆಯೇ ಬಂಧಿಸಲಾಗಿದೆ. ಆರೋಪಿ ಶಾರೀಕ್ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಂಗಳೂರು ಆಟೋರಿಕ್ಷಾ ಬ್ಲಾಸ್ಟ್ ಪ್ರಕರಣ.. ಸ್ಫೋಟದ ವಿಡಿಯೋ ವೈರಲ್