ಮಂಗಳೂರು: ಕೃಷಿ ಇಲಾಖೆಯ ಸಸಿ ನೆಡುವ ಕಾರ್ಯಕ್ರಮಕ್ಕೆ 50 ಲಕ್ಷ ರೂ ಗಿಡಗಳನ್ನು ನೆಟ್ಟಿರುವ ಬಿಲ್ ಪಾವತಿ ಮಾಡಲು 1 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಮಂಗಳೂರು ಉಪ ಕೃಷಿ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿ ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ. ನಿವೃತ್ತಿ ಅರಣ್ಯ ಅಧಿಕಾರಿ ದೂರಿನ ಮೇರೆಗೆ ಲೋಕಾಯುಕ್ತರು ದಾಳಿ ಮಾಡಿದ್ದರು.
ಸಾರ್ವಜನಿಕರಿಗೆ 50 ಲಕ್ಷ ಮೌಲ್ಯದ ಗಿಡ ವಿತರಣೆ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿ ಆಗಿದ್ದ ಪರಮೇಶ್.ಎನ್.ಪಿ ಅವರು ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ಆಗಸ್ಟ್ 31 ರಂದು ನಿವೃತ್ತಿಯಾಗಿದ್ದರು. ಅವರು ಕರ್ತವ್ಯದಲ್ಲಿದ್ದಾಗ 2022-23 ಮತ್ತು 2023-24ನೇ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ WDC.2 0 ಯೋಜನೆಯಡಿ 50 ಲಕ್ಷ ಮೌಲ್ಯದ ಗಿಡಗಳನ್ನು ನೆಡಲಾಗಿತ್ತು.
ಬಂಟ್ವಾಳ ತಾಲೂಕು ಸಜೀಪ ಮುನ್ನೂರು, ಸಜೀಪ ಮೂಡ, ಸಜೀಪಪಡು, ಸಜೀಪನಡು, ಕುರ್ನಾಡು, ನರಿಂಗಾನ, ಬಾಳೆಪುಣಿ ಮತ್ತು ಮಂಜನಾಡಿ ಗ್ರಾಮದ ಜನರಿಗೆ ಸರ್ಕಾರದಿಂದ 50 ಲಕ್ಷ ಮೌಲ್ಯದ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ನೀಡಲಾಗಿತ್ತು . ಈ ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿಯಿಂದ ಸಸಿಗಳನ್ನು ಪಡೆದು ಸಾರ್ವಜನಿಕರಿಗೆ ಪೂರೈಕೆ ಮಾಡಲಾಗಿತ್ತು.
ಕಣ್ಣನ್ ನರ್ಸರಿ ಗುತ್ತಿಗೆದಾರ 50 ಲಕ್ಷ ರೂ ಸರ್ಕಾರದಿಂದ ಬರಲು ಬಾಕಿ ಇದೆ ಎಂದು ನಿವೃತ್ತಿ ಅಧಿಕಾರಿ ಪರಮೇಶ ಎನ್.ಪಿಗೆ ತಿಳಿಸಿದ್ದರು. ಕಣ್ಣನ್ ನರ್ಸರಿ ಗುತ್ತಿಗೆದಾರರ ಬಿಲ್ ಬಾಕಿ ಇದ್ದು, 50 ಲಕ್ಷ ಹಣ ಪಾವತಿಸುವಂತೆ ಮಂಗಳೂರು ವಿಭಾಗ ಉಪ ಕೃಷಿ ನಿರ್ದೇಶಕಿ ಅವರಿಗೆ ನಿವೃತ್ತ ಅಧಿಕಾರಿ ಪರಮೇಶ ಮನವಿ ಮಾಡಿದ್ದರು. ಬಿಲ್ ಪಾವತಿಗೆ ಮೊತ್ತದ ಶೇ15ರಷ್ಟು ಮುಂಗಡವಾಗಿ ಲಂಚದ ರೂಪದಲ್ಲಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು.
ಮಂಗಳೂರು ಉಪ ಕೃಷಿ ನಿರ್ದೇಶಕಿ ಅವರು ನಿವೃತ್ತ ಕೃಷಿ ಅಧಿಕಾರಿಯಿಂದ ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕ ಕಲಾವತಿ.ಕೆ, ಚಲುವರಾಜು ಹಾಗೂ ಪೊಲೀಸ್ ನಿರೀಕ್ಷಕ ಸುರೇಶ್ ಕುಮಾರ್.ಪಿ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
ಇದನ್ನೂಓದಿ:ಗುತ್ತಿಗೆದಾರನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪ.. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸಿಸಿಬಿ ವಶಕ್ಕೆ