ಕಡಬ: ನಾದಿನಿಯ ಮುಖಕ್ಕೆ ಸ್ವತಃ ತನ್ನ ಬಾವನೇ ಆ್ಯಸಿಡ್ ಎರಚಿದ ಪ್ರಕರಣ ಕೋಡಿಂಬಾಳದಲ್ಲಿ ಗುರುವಾರ ಸಂಜೆ ನಡೆದಿದೆ. ಈ ವೇಳೆ ಮಹಿಳೆಯ ಪಕ್ಕದಲ್ಲಿದ್ದ ಮಗುವಿಗೂ ಆ್ಯಸಿಡ್ ತಾಗಿದೆ.
ಆ್ಯಸಿಡ್ ಎರಚಿದ ಆರೋಪಿಯನ್ನು ಕೋಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂದು ಗುರುತಿಸಲಾಗಿದೆ. ಇವರು ವೃತ್ತಿಯಲ್ಲಿ ಎಲ್‍ಐಸಿ ಏಜೆಂಟ್ ಆಗಿದ್ದು, ಕೃಷಿಕರು ಕೂಡಾ ಹೌದು. ವಿಧವೆಯಾಗಿರುವ ತನ್ನ ತಮ್ಮನ ಪತ್ನಿ ಸ್ವಪ್ನಾ(35) ಅವರ ಮುಖಕ್ಕೆ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಎರಚಿದ್ದಾನೆ.

ಈ ಸಂದರ್ಭದಲ್ಲಿ ಸ್ವಪ್ನಾ ಬಳಿಯಿದ್ದ ಮಗುವಿಗೂ ಆ್ಯಸಿಡ್ ತಾಗಿದ್ದು, ತಾಯಿ ಹಾಗೂ ಮಗು ಇಬ್ಬರನ್ನೂ ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಪ್ನಾ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ತಮ್ಮ ಪತಿ ರವಿ ಮೃತಪಟ್ಟಿದ್ದರಿಂದ ಸ್ವಪ್ನಾ ಪ್ರತ್ಯೇಕವಾಗಿ ತನ್ನ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಜಯಾನಂದ ಹಾಗೂ ಸ್ವಪ್ನಾ ಅವರ ಮಧ್ಯೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಇತ್ತು. ಅದು ಭೂವಿವಾದಕ್ಕೆ ತಿರುಗಿ ಇವರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗ್ತಿದೆ. ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದ್ದರೂ ಸಹ ಬುಧವಾರದಂದು ವಿವಾದ ಮತ್ತೆ ಭುಗಿಲೆದ್ದಿತ್ತು. ಮತ್ತೆ ಈ ಜಗ ಗುರುವಾರ ಸಂಜೆ ಆ್ಯಸಿಡ್ ಎರಚುವವರೆಗೂ ಬಂದು ನಿಂತಿದೆ. ಕಡಬ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.